ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಉಲ್ಬಣಿಸಿರುವ ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಎರಡನೇ ಹಂತದ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಲು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಇರಾನ್ ರಾಜಧಾನಿ ಟೆಹ್ರಾನ್‌ಗೆ ಭೇಟಿ ನೀಡಿದ್ದಾರೆ. ಈ ಐತಿಹಾಸಿಕ ಭೇಟಿಯು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ವಾಷಿಂಗ್ಟನ್‌ನಿಂದ ಇರಾನ್ ನಾಯಕತ್ವಕ್ಕೆ ವಿಶೇಷ ಸಂದೇಶವನ್ನು ಹೊತ್ತು ತಂದಿರುವ ಪಾಕ್ ನಿಯೋಗವು, ಉಭಯ ದೇಶಗಳ ನಡುವಿನ ಸಂವಹನ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಹಂತದ ಮಾತುಕತೆಗಳು ಯಾವುದೇ ಅಂತಿಮ ನಿರ್ಧಾರವಿಲ್ಲದೆ ಅಂತ್ಯಗೊಂಡಿದ್ದವು. ಈಗ ಇಸ್ಲಾಮಾಬಾದ್‌ನಲ್ಲೇ ಎರಡನೇ ಸುತ್ತಿನ ಮಾತುಕತೆ ನಡೆಸುವ ಬಗ್ಗೆ ಮುನೀರ್ ಚರ್ಚಿಸುತ್ತಿದ್ದಾರೆ.
ಏಪ್ರಿಲ್ 22ಕ್ಕೆ ಮುಕ್ತಾಯಗೊಳ್ಳಲಿರುವ ಅಮೆರಿಕ-ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರನ್ನೊಳಗೊಂಡ ನಿಯೋಗವು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಖಾಲಿಬಾಫ್ ಅವರನ್ನು ಭೇಟಿ ಮಾಡಿ ದೀರ್ಘಕಾಲ ಸಮಾಲೋಚನೆ ನಡೆಸಿದೆ.








