ಬೆಂಗಳೂರು : ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಮಹಿಳೆಯರು ತಮ್ಮ ಮಾಸಿಕ ಋತುಚಕ್ರದ ಸಮಯದಲ್ಲಿ ಅನುಭವಿಸುವ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಪರಿಗಣಿಸಿ, ಅವರಿಗೆ ವೇತನ ಸಹಿತ ರಜೆ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, ಮಹಿಳೆಯರ ಆರೋಗ್ಯದ ಹಕ್ಕು ಮತ್ತು ಕೆಲಸದ ಸ್ಥಳದಲ್ಲಿನ ಘನತೆಯನ್ನು ಎತ್ತಿಹಿಡಿಯಲು ಈ ಕ್ರಮ ಅಗತ್ಯವೆಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕ ಗೆಜೆಟ್ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಸಂವಿಧಾನದಲ್ಲಿ ಅಡಕವಾಗಿರುವ ಜೀವಿಸುವ ಮತ್ತು ಸಮಾನತೆಯ ಹಕ್ಕನ್ನು ಮುಟ್ಟಿನ ರಜೆಯ ನೀತಿ ಮತ್ತು ಇದರ ಸಂಬಂಧ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಮಸೂದೆಯಲ್ಲಿ ವಿಸ್ತರಿಸಲಾಗಿದೆ. ಹೀಗಾಗಿ ಅಸಂಘಟಿತ ವಲಯ ಸೇರಿ ಎಲ್ಲಾ ವಲಯಗಳಲ್ಲೂ ಸರ್ಕಾರವು ತನ್ನ ನೀತಿ ಜಾರಿ ಮಾಡಿರುವ ಸಂಬಂಧ ಖಾತರಿಪಡಿಸಬೇಕು ಎಂದು ಪೀಠ ಹೇಳಿದೆ.
ಭಾರತದಲ್ಲಿ ಈಗಾಗಲೇ ಬಿಹಾರ ಮತ್ತು ಕೇರಳ ರಾಜ್ಯಗಳು ವಿದ್ಯಾರ್ಥಿನಿಯರಿಗೆ ಮತ್ತು ಉದ್ಯೋಗಿಗಳಿಗೆ ಇಂತಹ ರಜೆ ಸೌಲಭ್ಯವನ್ನು ಘೋಷಿಸಿವೆ. ಕರ್ನಾಟಕ ಸರ್ಕಾರವು ಈಗ ಹೈಕೋರ್ಟ್ ನಿರ್ದೇಶನದಂತೆ ತಜ್ಞರ ಸಮಿತಿಯನ್ನು ರಚಿಸಿ, ಎಷ್ಟು ದಿನಗಳ ರಜೆ ನೀಡಬೇಕು ಮತ್ತು ಇದನ್ನು ಹೇಗೆ ಜಾರಿಗೆ ತರಬೇಕು ಎಂಬ ಬಗ್ಗೆ ವರದಿಯನ್ನು ಸಿದ್ಧಪಡಿಸುವ ನಿರೀಕ್ಷೆಯಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, ಸರ್ಕಾರದ ನೀತಿಯು ಪ್ರಗತಿಪರ ಹೆಜ್ಜೆಯಾಗಿದ್ದು, ವಿಶಾಲ ಮತ್ತು ವೈವಿಧ್ಯಮಯ ಅಸಂಘಟಿತ ವಲಯದಿಂದ ಕೆಲವು ಪ್ರಾಯೋಗಿಕ ಅಡೆತಡೆ ಉದ್ಭವಿಸಿವೆ. ಮುಟ್ಟಿನ ರಜೆಗೆ ಸಂಬಂಧಿಸಿದ ಮಸೂದೆಯು ವಿಧಾನಸಭೆಯ ಪರಿಗಣನೆಯಲ್ಲಿದೆ ಎಂದು ಪೀಠಕ್ಕೆ ವಿವರಿಸಿದ್ದರು.








