ನವದೆಹಲಿ:ಮಹಿಳಾ ಮೀಸಲಾತಿ ಮಸೂದೆಯ ಜಾರಿಯನ್ನು ಕ್ಷೇತ್ರ ಪುನರ್ವಿಂಗಡಣೆಯ (Delimitation) ಜೊತೆ ಬೆಸೆಯುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ‘ಇಂಡಿಯಾ’ (INDIA Bloc) ಮೈತ್ರಿಕೂಟ ತೀವ್ರವಾಗಿ ಖಂಡಿಸಿದೆ. ಸರ್ಕಾರದ ಈ ನಡೆಯನ್ನು “ರಾಜಕೀಯ ಕುತಂತ್ರ” ಎಂದು ಕರೆದಿರುವ ವಿರೋಧ ಪಕ್ಷಗಳು, ಸಂಸತ್ತಿನಲ್ಲಿ ಈ ಮಸೂದೆಯನ್ನು ಒಗ್ಗಟ್ಟಾಗಿ ವಿರೋಧಿಸಲು ನಿರ್ಧರಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ನಾವು ಮಹಿಳಾ ಮೀಸಲಾತಿಯ ಪರವಾಗಿದ್ದೇವೆ, ಆದರೆ ಅದನ್ನು ಜಾರಿಗೆ ತರುವ ನೆಪದಲ್ಲಿ ಸರ್ಕಾರ ಮಾಡುತ್ತಿರುವ ಕ್ಷೇತ್ರ ಪುನರ್ವಿಂಗಡಣೆಯ ಪದ್ಧತಿಯನ್ನು ವಿರೋಧಿಸುತ್ತೇವೆ ಎಂದು ‘ಇಂಡಿಯಾ’ ಕೂಟ ಸ್ಪಷ್ಟಪಡಿಸಿದೆ.ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಲೋಕಸಭೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸ್ಥಾನಗಳು ಮತ್ತು ಪ್ರಭಾವ ಕಡಿಮೆಯಾಗಬಹುದು ಎಂಬ ಭೀತಿಯನ್ನು ವಿರೋಧ ಪಕ್ಷಗಳು ವ್ಯಕ್ತಪಡಿಸಿವೆ.
“ಸರ್ಕಾರವು ಮಹಿಳಾ ಮೀಸಲಾತಿಯನ್ನು ಕೇವಲ ಒಂದು ದಾಳವಾಗಿ ಬಳಸಿಕೊಂಡು, ತನ್ನ ರಾಜಕೀಯ ಲಾಭಕ್ಕಾಗಿ ಕ್ಷೇತ್ರಗಳ ಗಡಿ ಬದಲಿಸಲು ಮುಂದಾಗಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.








