ನವದೆಹಲಿ: ಸಂಸತ್ ನಲ್ಲಿ ಇಂದು ಎರಡು ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಲಾಗಿದೆ. ಈ ವಿಧೇಯಕಗಳು ಅಂಗೀಕಾರಗೊಂಡರೆ ಲೋಕಸಭೆಯ ಒಟ್ಟು ಸದಸ್ಯರ ಬಲವು ಈಗಿರುವ 543ರಿಂದ 850ಕ್ಕೆ ಏರಿಕೆಯಾಗಲಿದೆ. ಇದರೊಂದಿಗೆ ಬಹುಕಾಲದ ಬೇಡಿಕೆಯಾದ ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು 2029ರಿಂದ ಜಾರಿಗೆ ತರುವ ಮಹತ್ವದ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಲೋಕಸಭೆಯ ಒಟ್ಟು ಸ್ಥಾನಗಳನ್ನು 850ಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ. ಇದರಲ್ಲಿ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 815 ಸ್ಥಾನಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 35 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಮಹಿಳಾ ಮೀಸಲಾತಿ: ಒಟ್ಟು ಸ್ಥಾನಗಳಲ್ಲಿ ಶೇ. 33ರಷ್ಟು ಅಂದರೆ ಸುಮಾರು 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಈ ಮೀಸಲಾತಿಯು ಪ್ರತಿ 15 ವರ್ಷಕ್ಕೊಮ್ಮೆ ರೋಸ್ಟರ್ ಪದ್ಧತಿಯಂತೆ ಮರುಹಂಚಿಕೆಯಾಗಲಿದೆ.ಈ ಬದಲಾವಣೆಗಳನ್ನು 2026ರ ಬದಲಾಗಿ 2011ರ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ ಜಾರಿಗೆ ತರಲು ಉದ್ದೇಶಿಸಲಾಗಿದೆ.
ಕರ್ನಾಟಕ ವಿಧಾನಸಭೆಗೂ ಬಿಸಿ: ಪ್ರಸ್ತಾಪಿತ ವಿಧೇಯಕದ ಅನ್ವಯ ಕರ್ನಾಟಕ ವಿಧಾನಸಭೆಯ ಸ್ಥಾನಗಳ ಸಂಖ್ಯೆಯೂ ಈಗಿರುವ 224ರಿಂದ 336ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.
ಮರುವಿಂಗಡಣಾ ಆಯೋಗದ ರಚನೆ:
ಕ್ಷೇತ್ರಗಳ ಮರುವಿಂಗಡಣೆಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ‘ಕ್ಷೇತ್ರ ಮರುವಿಂಗಡಣಾ ಆಯೋಗ’ ರಚನೆಯಾಗಲಿದೆ. ಈ ಆಯೋಗವು ಯಾವ ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಬೇಕು ಮತ್ತು ಕ್ಷೇತ್ರಗಳ ವ್ಯಾಪ್ತಿ ಹೇಗಿರಬೇಕು ಎಂಬುದನ್ನು ನಿರ್ಧರಿಸಲಿದೆ.
ರಾಜಕೀಯ ಕುತೂಹಲ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ ವಿಧೇಯಕಗಳನ್ನು ಮಂಡಿಸಿದ್ದಾರೆ. ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಯನ್ನು ಸ್ವಾಗತಿಸಿದೆಯಾದರೂ, ಕ್ಷೇತ್ರಗಳ ಮರುವಿಂಗಡಣೆ ಮತ್ತು ರಾಜ್ಯಸಭೆಯಲ್ಲಿ ಬಹುಮತದ ಕೊರತೆಯ ಹಿನ್ನೆಲೆಯಲ್ಲಿ ವಿಧೇಯಕ ಹೇಗೆ ಅಂಗೀಕಾರಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.








