ಬೆಂಗಳೂರು : ಚಲಾವಣೆ ರದ್ದಾಗಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳಂತೆ ನಕಲಿ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಯಲ್ಲಿ ಬದಲಾಯಿಸಲು ಯತ್ನಿಸಿದ ವ್ಯಕ್ತಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 2 ಸಾವಿರ ರೂಪಾಯಿ ಮುಖಬೆಲೆಯ 300ಕ್ಕೂ ಅಧಿಕ ನಕಲಿ ನೋಟುಗಳನ್ನು ತಂದಿದ್ದ 52 ವರ್ಷ ವಯಸ್ಸಿನ ವ್ಯಕ್ತಿಯನ್ನು ಬಂಧಿಸಲಾಗಿದೆ.
ನಾಗಶೆಟ್ಟಿಹಳ್ಳಿಯ ನಿವಾಸಿಯಾಗಿರುವ ಬಂಧಿತ ಆರೋಪಿ ಎಪ್ರಿಲ್ 9ರಂದು ನೃಪತುಂಗ ರಸ್ತೆಯ ಆರ್‌ಬಿಐ ಕಚೇರಿಗೆ ಭೇಟಿ ನೀಡಿದ್ದ. ತನ್ನ ಬಳಿ ಇರುವ 2 ಸಾವಿರ ರೂಪಾಯಿ ಮುಖಬೆಲೆಯ ಸುಮಾರು 375 ನೋಟುಗಳನ್ನು ಜಮೆ ಮಾಡುವಂತೆ ಕೋರಿದ್ದ. ಆದರೆ ಅಧಿಕಾರಿಗಳು ನೋಟುಗಳನ್ನು ತಪಾಸಣೆ ನಡೆಸಿದಾಗ ಅವುಗಳು ನಕಲಿ ಎಂದು ತಿಳಿದುಬಂದಿದೆ. ಆರ್‌ಬಿಐ ಸಹಾಯಕ ಜನರಲ್ ಮ್ಯಾನೇಜರ್ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣದ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗೆ ಈ ನಕಲಿ ನೋಟುಗಳನ್ನು ಪೂರೈಸಿದವರು ಯಾರು ಮತ್ತು ಇವುಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 2023ರಲ್ಲಿ ಆರ್‌ಬಿಐ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದರೂ, ಸಾರ್ವಜನಿಕರಿಗೆ ಆರ್‌ಬಿಐ ಕಚೇರಿಗಳಲ್ಲಿ ಇವುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಬ್ಬ ವ್ಯಕ್ತಿ ಏಕಕಾಲಕ್ಕೆ ಗರಿಷ್ಠ 20,000 ರೂ. ಮೌಲ್ಯದ ನೋಟುಗಳನ್ನು ಮಾತ್ರ ಬದಲಾಯಿಸಬಹುದು.








