ಮಂಡ್ಯ :- ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದಲೇ ಗಟ್ಟಿಗೊಳಿಸಲು ಈ ಪ್ರಶಿಕ್ಷಣ ಮಹಾಭಿಯಾನವು ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿಯ ಖಾಸಗಿ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ಮದ್ದೂರು ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ – 2026 ರ ಎರಡು ದಿನದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಕ್ಷವನ್ನು ತಳ ಮಟ್ಟದಿಂದಲೇ ಗಟ್ಟಿಗೊಳಿಸಲು ಈ ಪ್ರಶಿಕ್ಷಣ ಮಹಾಭಿಯಾನವು ಪ್ರಮುಖ ಪಾತ್ರ ವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮಾತಿನಂತೆ ಉದ್ದೇಶ ದೊಡ್ಡದಿರಬೇಕೆ ಹೊರತು ಹುದ್ದೆಯಲ್ಲ. ಅವರ ವಿಚಾರಧಾರೆಯಂತೆ ಬಿಜೆಪಿ ಕಾರ್ಯಕರ್ತರು ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ, ಸೌಲಭ್ಯ ಸಿಗಬೇಕು ಎಂಬುದೇ ಬಿಜೆಪಿಯ ಧ್ಯೇಯವಾಗಿದೆ ಎಂದರು.
ಭಾರತೀಯ ಜನತಾ ಪಾರ್ಟಿಯ ಸೈದ್ಧಾಂತಿಕ ಹಿನ್ನೆಲೆ ಹಾಗೂ ಪಂಡಿತ್ ದೀನದಯಾಳ ಉಪಾಧ್ಯಾಯರು ಪ್ರತಿಪಾದಿಸಿದ ಏಕಾತ್ಮ ಮಾನವ ದರ್ಶನ ಸಿದ್ಧಾಂತದ ಮಹತ್ವವನ್ನು ಅವರು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟು ಆಳವಾದ ವಿಚಾರಗಳನ್ನು ಹಂಚಿಕೊಂಡರು.
ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಾತನಾಡಿ, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನಲ್ಲೂ ಸೈದ್ಧಾಂತಿಕ ಸ್ಪಷ್ಟತೆ ಮೂಡಿಸುವುದು ಮತ್ತು ಸಂಘಟನಾತ್ಮಕ ಕೌಶಲ್ಯಗಳನ್ನು ಬಲಪಡಿಸುವುದು ಈ ಪ್ರಶಿಕ್ಷಣ ವರ್ಗದ ಪ್ರಮುಖ ಉದ್ದೇಶವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಹದಗೆಟ್ಟಿದೆ. ಜನರಿಗೆ ಕೊಟ್ಟಿರುವ ಭರವಸೆಗಳು ಈಡೇರಿಲ್ಲ. ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮದ್ದೂರು ಮಂಡಲ ಅಧ್ಯಕ್ಷ ಸಿ.ಕೆ.ಸತೀಶ್ ಮಾತನಾಡಿ, ಪಕ್ಷವನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸಲು ಈ ಪ್ರಶಿಕ್ಷಣ ಮಹಾಭಿಯಾನವು ಪ್ರಮುಖ ಪಾತ್ರ ವಹಿಸಲಿದೆ. ಎಲ್ಲ ಮಂಡಲಗಳಲ್ಲಿ ಪ್ರಶಿಕ್ಷಣ ವರ್ಗಗಳು ಜರುಗಲಿದ್ದು, ರಾಜ್ಯ ಮಟ್ಟದ ಭಾಷಣಕಾರರು ಭಾಗವಹಿಸುವರು. ಹಾಗೂ ಮುಂಬರುವ ದಿನಗಳಲ್ಲಿ ನಡೆಯಲಿರುವ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗಗಳ ಸಂಪೂರ್ಣ ವಿವರ, ರೂಪುರೇಷೆ ಹಾಗೂ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಎಳೆಎಳೆಯಾಗಿ ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಅಶೋಕ್, ಕೆಂಪುಬೋರಯ್ಯ, ನಂದೀಶ್, ಮಧುಕುಮಾರ್, ಎಂ.ಸಿ.ಸಿದ್ದು, ಸಂತೋಷ್, ಶ್ವೇತಾ, ರವಿ, ರಂಜಿತಾ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ








