ಟೆಹ್ರಾನ್: ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹೋರ್ಮುಜ್ ಜಲಸಂಧಿಯಲ್ಲಿ (Strait of Hormuz) ಉದ್ವಿಗ್ನತೆ ತುತ್ತತುದಿಗೆ ತಲುಪಿದೆ. ಇರಾನ್ ಬಂದರುಗಳಿಗೆ ಅಮೆರಿಕ ನೌಕಾಪಡೆಯು ದಿಗ್ಬಂಧನ ವಿಧಿಸಲು ಮುಂದಾಗುತ್ತಿದ್ದಂತೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
”ನಮ್ಮ ದಿಗ್ಬಂಧನವನ್ನು ಮೀರಿ ಬರಲು ಪ್ರಯತ್ನಿಸುವ ಅಥವಾ ಅಮೆರಿಕದ ಹಡಗುಗಳಿಗೆ ಅಡ್ಡಿಪಡಿಸುವ ಯಾವುದೇ ಇರಾನ್ ನೌಕೆಗಳನ್ನು ತಕ್ಷಣವೇ ನಾಶಪಡಿಸಲಾಗುವುದು,” ಎಂದು ಟ್ರಂಪ್ ಗುಡುಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, “ನಮ್ಮ ದಿಗ್ಬಂಧನದ ಹತ್ತಿರ ಯಾವುದೇ ಇರಾನ್ ನೌಕೆಗಳು ಸುಳಿದರೂ ಅವುಗಳನ್ನು ಕ್ಷಣಾರ್ಧದಲ್ಲಿ ಧ್ವಂಸಗೊಳಿಸಲು ಸೈನ್ಯಕ್ಕೆ ಸೂಚನೆ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.
ಟ್ರಂಪ್ ಅವರ ಈ ಬೆದರಿಕೆಗೆ ಇರಾನ್ ಕೂಡ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. “ವಾಷಿಂಗ್ಟನ್ಗೆ ನಮ್ಮ ಶಕ್ತಿಯ ಬಗ್ಗೆ ಚೆನ್ನಾಗಿ ತಿಳಿದಿದೆ. ಇರಾನ್ ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ. ಅಮೆರಿಕದ ಯಾವುದೇ ಉದ್ಧಟತನದ ನಡೆಗೆ ನಾವು ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ,” ಎಂದು ಇರಾನ್ ಸೇನಾ ಮೂಲಗಳು ಎಚ್ಚರಿಸಿವೆ.








