ವಾಷಿಂಗ್ಟನ್:ಅಮೆರಿಕದ ಇಂಡಿಯಾನಾದಲ್ಲಿ ನಾಗರಿಕ ಸಮಾಜವೇ ನಾಚಿಕೆಯಿಂದ ತಲೆತಗ್ಗಿಸುವಂತಹ ಘೋರ ಘಟನೆಯೊಂದು ನಡೆದಿದೆ. ಸರಿಯಾದ ಆಹಾರವಿಲ್ಲದೆ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮವೊಂದು, ಹಸಿವು ತಾಳಲಾರದೆ ತಾನು ಧರಿಸಿದ್ದ ಡೈಪರ್ ಅನ್ನೇ ತಿಂದು ಕೊನೆಯುಸಿರೆಳೆದಿದೆ. ಈ ಸಂಬಂಧ ಮಗುವಿನ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮಗು ಮೃತಪಟ್ಟ ಸ್ಥಿತಿಯಲ್ಲಿದ್ದ ಕೊಠಡಿಯು ಅತ್ಯಂತ ಕೊಳಕಾಗಿತ್ತು. ಮಗುವಿನ ಸಾವು ಕೇವಲ ಆಕಸ್ಮಿಕವಲ್ಲ, ಬದಲಿಗೆ ಪೋಷಕರ ಅಮಾನವೀಯ ನಿರ್ಲಕ್ಷ್ಯದ ಫಲ ಎಂದು ತನಿಖೆಯಿಂದ ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಹೊಟ್ಟೆಯಲ್ಲಿ ಡೈಪರ್‌ನ ತುಣುಕುಗಳು ಪತ್ತೆಯಾಗಿವೆ. ಮಗುವಿಗೆ ದೀರ್ಘಕಾಲದವರೆಗೆ ಆಹಾರ ನೀಡದ ಕಾರಣ, ತೀವ್ರ ಹಸಿವಿನಿಂದ ಮಗು ತಾನು ಧರಿಸಿದ್ದ ಡೈಪರ್ ಅನ್ನೇ ಕಿತ್ತು ತಿಂದಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಮಗುವನ್ನು ಕೂಡಿಹಾಕಿದ್ದ ಕೊಠಡಿಯ ತುಂಬಾ ಮಲ-ಮೂತ್ರ ಮತ್ತು ಕಸ ತುಂಬಿತ್ತು. ಗಾಳಿ-ಬೆಳಕಿಲ್ಲದ ಆ ಕೊಳಕು ಕೋಣೆಯಲ್ಲಿ ಮಗು ಪೌಷ್ಟಿಕಾಂಶದ ಕೊರತೆಯಿಂದ ಕೃಶವಾಗಿತ್ತು.
ಮಗುವಿನ ತಂದೆ ಮತ್ತು ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಮೇಲೆ ‘ಮಕ್ಕಳ ಮೇಲಿನ ಕ್ರೌರ್ಯ’ ಮತ್ತು ‘ಕೊಲೆ’ ಪ್ರಕರಣಗಳನ್ನು ದಾಖಲಿಸಲಾಗಿದೆ.








