ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ಉದ್ದೇಶದ ಹಿಂದೆ ರಾಜಕೀಯ ತಂತ್ರವಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ. “ಅಸಲಿ ವಿಷಯ ಮಹಿಳಾ ಮೀಸಲಾತಿಯಲ್ಲ, ಬದಲಿಗೆ ಅದರೊಂದಿಗೆ ತಳುಕು ಹಾಕಲಾಗಿರುವ ಕ್ಷೇತ್ರ ಪುನರ್ವಿಂಗಡಣೆ (Delimitation)” ಎಂದು ಅವರು ಪ್ರತಿಪಾದಿಸಿದ್ದಾರೆ.
ಏಪ್ರಿಲ್ 16 ರಿಂದ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಈ ಆತಂಕ ವ್ಯಕ್ತಪಡಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲೇ ಮಹಿಳಾ ಮೀಸಲಾತಿ ಜಾರಿಗೆ ತರಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು. ಆದರೆ ಈಗ 2029ಕ್ಕೆ ಜಾರಿಗೆ ತರಲು ಮುಂದಾಗಿರುವುದು ರಾಜಕೀಯ ಲಾಭಕ್ಕಾಗಿ ಎಂದು ಸೋನಿಯಾ ಟೀಕಿಸಿದ್ದಾರೆ.
ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಜೋಡಿಸಿರುವುದು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಇದು ಕೇವಲ ಮಹಿಳೆಯರಿಗೆ ಸ್ಥಾನ ನೀಡುವುದಲ್ಲ, ಬದಲಿಗೆ ಲೋಕಸಭೆಯ ಒಟ್ಟು ಸ್ಥಾನಗಳನ್ನು ಹೆಚ್ಚಿಸುವ ಹುನ್ನಾರವಾಗಿದೆ ಎಂದು ಕಾಂಗ್ರೆಸ್ ದೂರಿದೆ.
ರಾಹುಲ್ ಗಾಂಧಿ ಅವರು ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಿದ್ದು, “ಕ್ಷೇತ್ರ ಪುನರ್ವಿಂಗಡಣೆಯು ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ರಾಜಕೀಯ ಅಸಮತೋಲನವನ್ನು ಉಂಟುಮಾಡಬಹುದು. ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣದ ರಾಜ್ಯಗಳಿಗೆ ಇದರಿಂದ ಅನ್ಯಾಯವಾಗಲಿದೆ” ಎಂದು ಎಚ್ಚರಿಸಿದ್ದಾರೆ.ಮಹಿಳಾ ಮೀಸಲಾತಿಯೊಳಗೆ ಹಿಂದುಳಿದ ವರ್ಗಗಳ (OBC) ಮಹಿಳೆಯರಿಗೂ ಪ್ರತ್ಯೇಕ ಕೋಟಾ ಇರಬೇಕು ಎಂಬುದು ಕಾಂಗ್ರೆಸ್‌ನ ಪ್ರಬಲ ಬೇಡಿಕೆಯಾಗಿದೆ.








