ರಾಯ್‌ಪುರ: ಛತ್ತೀಸ್‌ಗಢ ರಾಜ್ಯವು ಸಶಸ್ತ್ರ ನಕ್ಸಲ್ ಬಂಡುಕೋರರಿಂದ ಸಂಪೂರ್ಣ ಮುಕ್ತವಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕೃತವಾಗಿ ಘೋಷಿಸಿದ ಕೇವಲ ಎರಡೇ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಎನ್‌ಕೌಂಟರ್ ನಡೆದಿದೆ. ನಾರಾಯಣಪುರ ಜಿಲ್ಲೆಯ ಅಬೂಜ್‌ಮಡ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬ ಮಾವೋವಾದಿ ಹತನಾಗಿದ್ದಾನೆ.
ದಟ್ಟ ಅರಣ್ಯ ಪ್ರದೇಶವಾದ ಅಬೂಜ್‌ಮಡ್‌ನಲ್ಲಿ ನಕ್ಸಲರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಮೀಸಲು ಪಡೆ (DRG) ಮತ್ತು ಗಡಿ ಭದ್ರತಾ ಪಡೆ (BSF) ಜಂಟಿ ಕಾರ್ಯಾಚರಣೆ ನಡೆಸಿದ್ದವು.ಭದ್ರತಾ ಪಡೆಗಳನ್ನು ಕಂಡೊಡನೆ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದು, ಪ್ರತಿಯಾಗಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲೀಯ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವಾಲಯವು “ಛತ್ತೀಸ್‌ಗಢ ಈಗ ನಕ್ಸಲ್ ಮುಕ್ತ” ಎಂದು ಘೋಷಿಸಿತ್ತು. ಆದರೆ ಈ ಘಟನೆಯು ಸರ್ಕಾರ ಮತ್ತು ಗುಪ್ತಚರ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.







