ಬೈರೂತ್: ಲೆಬನಾನ್ ವಿರುದ್ಧದ ಭೂಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಇಸ್ರೇಲ್, ದಕ್ಷಿಣ ಲೆಬನಾನ್‌ನ ಗಡಿ ಭಾಗದ ಗ್ರಾಮಗಳನ್ನು ಭೂಪಟದಿಂದಲೇ ಅಳಿಸಿಹಾಕುವ ಭೀಕರ ಕೃತ್ಯಕ್ಕೆ ಮುಂದಾಗಿದೆ. ಇಡೀ ಹಳ್ಳಿಯ ಮನೆಗಳಿಗೆ ಸ್ಫೋಟಕಗಳನ್ನು ಜೋಡಿಸಿ (Rigging), ರಿಮೋಟ್ ಮೂಲಕ ಏಕಕಾಲಕ್ಕೆ ಸ್ಫೋಟಿಸುವ ಮೂಲಕ ಜನವಸತಿ ಪ್ರದೇಶಗಳನ್ನು ಇಸ್ರೇಲ್ ಸೇನೆ ಧ್ವಂಸ ಮಾಡುತ್ತಿದೆ.
ಗಡಿಯ ಉದ್ದಕ್ಕೂ ಇರುವ ತಯ್ಯೆಬೆ (Taybeh), ನಖೌರಾ (Naqoura) ಮತ್ತು ದೇರ್ ಸೆರಿಯಾನ್ ಸೇರಿದಂತೆ ಹಲವು ಗ್ರಾಮಗಳನ್ನು ಇಸ್ರೇಲ್ ಸೇನೆಯು ಸಂಪೂರ್ಣವಾಗಿ ನೆಲಸಮ ಮಾಡಿದೆ.
“ಗಾಜಾದ ರಫಾ ಮಾದರಿಯಲ್ಲೇ ಲೆಬನಾನ್ ಗಡಿಯ ಎಲ್ಲಾ ಮನೆಗಳನ್ನು ನಾಶಪಡಿಸಬೇಕು” ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಆದೇಶಿಸಿದ್ದಾರೆ. ಹಿಜ್ಬುಲ್ಲಾ ಉಗ್ರರು ಈ ಮನೆಗಳಲ್ಲಿ ಸುರಂಗ ಮತ್ತು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದಾರೆ ಎಂಬುದು ಇಸ್ರೇಲ್‌ನ ವಾದ.
ಇಸ್ರೇಲ್ ಸೈನಿಕರೇ ಚಿತ್ರೀಕರಿಸಿದ ವೀಡಿಯೊಗಳಲ್ಲಿ, ಇಡೀ ಹಳ್ಳಿಯೇ ಬೆಂಕಿ ಮತ್ತು ಧೂಳಿನ ಉಂಡೆಯಾಗಿ ಕ್ಷಣಾರ್ಧದಲ್ಲಿ ಕುಸಿದು ಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಮಾಯಕ ನಾಗರಿಕರ ಮನೆಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸುತ್ತಿರುವುದು ಅಂತರಾಷ್ಟ್ರೀಯ ಕಾನೂನುಗಳ ಪ್ರಕಾರ ‘ಯುದ್ಧಾಪರಾಧ’ (War Crime) ಎಂದು ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.








