ದುಬೈ: ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗಳು ಹಳಿತಪ್ಪಿದ ಬೆನ್ನಲ್ಲೇ, ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಇಂದು (ಏಪ್ರಿಲ್ 13) ಬೆಳಿಗ್ಗೆಯಿಂದ ಇರಾನ್‌ನ ಎಲ್ಲಾ ಸಮುದ್ರ ಮಾರ್ಗ ಹಾಗೂ ಬಂದರುಗಳಿಗೆ ಕಠಿಣ ದಿಗ್ಬಂಧನ ವಿಧಿಸಲು ಸಜ್ಜಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ, ಇರಾನ್‌ಗೆ ಪ್ರವೇಶಿಸುವ ಅಥವಾ ಅಲ್ಲಿಂದ ಹೊರಬರುವ ಪ್ರತಿಯೊಂದು ಹಡಗನ್ನು ತಡೆಯಲು ಅಮೆರಿಕ ನೌಕಾಪಡೆ ಕಾರ್ಯಾಚರಣೆ ಆರಂಭಿಸಿದೆ.
ಇಂದು ಅಂತರಾಷ್ಟ್ರೀಯ ಕಾಲಮಾನ 14:00 GMT (ಭಾರತೀಯ ಕಾಲಮಾನ ಸಂಜೆ 7:30) ವೇಳೆಗೆ ದಿಗ್ಬಂಧನ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಸೆಂಟ್ರಲ್ ಕಮಾಂಡ್ ಪ್ರಕಟಿಸಿದೆ.
ಇರಾನ್ ಹೊರತುಪಡಿಸಿ ಇತರ ದೇಶಗಳಿಗೆ (ಸೌದಿ ಅರೇಬಿಯಾ, ಯುಎಇ ಇತ್ಯಾದಿ) ಸಂಚರಿಸುವ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಮುಕ್ತ ಅವಕಾಶ ನೀಡಲಾಗುವುದು. ಆದರೆ ಇರಾನ್ ಬಂದರುಗಳಿಗೆ ಹೋಗುವ ಯಾವುದೇ ದೇಶದ ಹಡಗನ್ನು ನಿರ್ದಾಕ್ಷಿಣ್ಯವಾಗಿ ತಡೆಯಲಾಗುವುದು ಎಂದು ಅಮೆರಿಕ ಎಚ್ಚರಿಸಿದೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ 20 ಗಂಟೆಗಳ ಸುದೀರ್ಘ ಮಾತುಕತೆಯಲ್ಲಿ ಇರಾನ್ ತನ್ನ ಪರಮಾಣು ಹಠವನ್ನು ಬಿಡದ ಕಾರಣ ಟ್ರಂಪ್ ಈ ಆರ್ಥಿಕ ದಿಗ್ಬಂಧನದ ತಂತ್ರ ಹೂಡಿದ್ದಾರೆ.ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಈಗಾಗಲೇ ಬ್ಯಾರೆಲ್‌ಗೆ 100 ಡಾಲರ್ ದಾಟಿದ್ದು, ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕತೆ ಮೇಲೆ ಇದು ನೇರ ಪರಿಣಾಮ ಬೀರುವ ಆತಂಕ ಎದುರಾಗಿದೆ.








