ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧದ ಉದ್ವಿಗ್ನತೆಯ ನಡುವೆ ಅಮೆರಿಕ ಮತ್ತು ಇರಾನ್ ನಡುವೆ 14 ದಿನಗಳ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಭಾರತದ ಎಲ್‌ಪಿಜಿ ಟ್ಯಾಂಕರ್ ‘ಜಗ್ ವಿಕ್ರಮ್’ (Jag Vikram) ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿದೆ. ಸಂಘರ್ಷದ ನಂತರ ಈ ಆಯಕಟ್ಟಿನ ಸಮುದ್ರ ಮಾರ್ಗದಲ್ಲಿ ಸಂಚರಿಸಿದ ಮೊದಲ ಭಾರತೀಯ ನೌಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಈ ನೌಕೆಯು ಸುಮಾರು 20,400 ಟನ್ ಅಡುಗೆ ಅನಿಲವನ್ನು (LPG) ಹೊತ್ತು ಸಾಗುತ್ತಿದೆ.ಹಡಗಿನಲ್ಲಿ 24 ಮಂದಿ ಭಾರತೀಯ ನಾವಿಕರಿದ್ದಾರೆ.
ಮುಂಬೈಗೆ ಆಗಮನ: ಏಪ್ರಿಲ್ 11ರಂದು (ಶನಿವಾರ) ಜಲಸಂಧಿಯನ್ನು ದಾಟಿರುವ ಈ ನೌಕೆಯು ಏಪ್ರಿಲ್ 15ರಂದು ಮುಂಬೈ ತಲುಪುವ ನಿರೀಕ್ಷೆಯಿದೆ.
ಕೇಂದ್ರ ಹಡಗು ಮತ್ತು ಬಂದರು ಸಚಿವ ಸರ್ಬಾನಂದ ಸೋನೊವಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. “ಭಾರತೀಯ ಧ್ವಜ ಹೊಂದಿರುವ ‘ಜಗ್ ವಿಕ್ರಮ್’ ನೌಕೆಯು ಪರ್ಷಿಯನ್ ಕೊಲ್ಲಿಯಿಂದ ಯಶಸ್ವಿಯಾಗಿ ಹೊರಬಂದಿದೆ. ಇದು ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆ,” ಎಂದು ಅವರು ತಿಳಿಸಿದ್ದಾರೆ.








