ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಹೂತಿದ್ದ ಗಣಿಗಳನ್ನು (Mines) ತೆರವುಗೊಳಿಸಲು ತನ್ನ ಎರಡು ಯುದ್ಧ ನೌಕೆಗಳು ಜಲಸಂಧಿಯ ಮೂಲಕ ಸಂಚರಿಸಿವೆ ಎಂಬ ಅಮೆರಿಕದ ಅಲ್-ಜಜೀರಾ ಮತ್ತು ಸೆಂಟ್ರಲ್ ಕಮಾಂಡ್ (CENTCOM) ವರದಿಗಳನ್ನು ಇರಾನ್ ಕಟುವಾಗಿ ನಿರಾಕರಿಸಿದೆ. ಅಮೆರಿಕದ ಈ ಹೇಳಿಕೆಯು ಕೇವಲ ‘ಪ್ರಚಾರದ ತಂತ್ರ’ ಎಂದು ಇರಾನ್ ಸೇನಾ ವಕ್ತಾರರು ಕಿಡಿಕಾರಿದ್ದಾರೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಶನಿವಾರ ಹೇಳಿಕೆ ನೀಡಿದ್ದು, ತನ್ನ ಯುಎಸ್ಎಸ್ ಫ್ರಾಂಕ್ ಇ. ಪೀಟರ್ಸನ್ ಮತ್ತು ಯುಎಸ್ಎಸ್ ಮೈಕೆಲ್ ಮರ್ಫಿ ಎಂಬ ಎರಡು ವಿಧ್ವಂಸಕ ನೌಕೆಗಳು (Destroyers) ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿವೆ ಎಂದು ತಿಳಿಸಿತ್ತು. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸಮುದ್ರದಲ್ಲಿ ಹೂತಿರುವ ಗಣಿಗಳನ್ನು ಪತ್ತೆಹಚ್ಚಿ ತೆರವುಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಈ ನೌಕೆಗಳು ಸಂಚರಿಸಿವೆ ಎಂದು ಅಮೆರಿಕ ಪ್ರತಿಪಾದಿಸಿತ್ತು.
ಅಮೆರಿಕದ ಈ ಘೋಷಣೆಯ ಬೆನ್ನಲ್ಲೇ ಇರಾನ್‌ನ ಖಾತಮ್ ಅಲ್-ಅನ್ಬಿಯಾ ಕೇಂದ್ರ ಕಚೇರಿಯ ವಕ್ತಾರರು ಈ ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
”ಅಮೆರಿಕದ ನೌಕೆಗಳು ಜಲಸಂಧಿಯನ್ನು ಪ್ರವೇಶಿಸಿವೆ ಎಂಬುದು ಸುಳ್ಳು. ಈ ಭಾಗದಲ್ಲಿ ಯಾವುದೇ ನೌಕೆಯ ಸಂಚಾರವನ್ನು ನಿಯಂತ್ರಿಸುವ ಸಂಪೂರ್ಣ ಹಕ್ಕು ಇರಾನ್ ಸಶಸ್ತ್ರ ಪಡೆಗಳ ಬಳಿಯೇ ಇದೆ” ಎಂದು ಇರಾನ್ ಸ್ಪಷ್ಟಪಡಿಸಿದೆ.
ಯಾವುದೇ ವಿದೇಶಿ ಸೇನಾ ನೌಕೆಗಳು ಅನುಮತಿಯಿಲ್ಲದೆ ಪ್ರವೇಶಿಸಿದರೆ “ತೀವ್ರವಾಗಿ ಪ್ರತಿಕ್ರಿಯಿಸುವುದಾಗಿ” IRGC ಎಚ್ಚರಿಕೆ ನೀಡಿದೆ.








