ನವದೆಹಲಿ: 2029ರ ಲೋಕಸಭಾ ಚುನಾವಣೆಯೊಳಗೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಐತಿಹಾಸಿಕ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಚರ್ಚಿಸಲು ಏಪ್ರಿಲ್ 16ರಿಂದ 18ರವರೆಗೆ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದ್ದು, ತನ್ನೆಲ್ಲಾ ಸಂಸದರಿಗೆ ಕಡ್ಡಾಯವಾಗಿ ಹಾಜರಿರುವಂತೆ ಬಿಜೆಪಿ ‘ತ್ರೀ-ಲೈನ್ ವಿಪ್’ (Three-line Whip) ಜಾರಿಗೊಳಿಸಿದೆ.
2023ರಲ್ಲಿ ಅಂಗೀಕರಿಸಲ್ಪಟ್ಟ ‘ನಾರಿ ಶಕ್ತಿ ವಂದನ್ ಅಧಿನಿಯಮ’ದ ಪ್ರಕಾರ, ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ನಂತರವಷ್ಟೇ ಮೀಸಲಾತಿ ಜಾರಿಯಾಗಬೇಕಿತ್ತು. ಇದು ಜಾರಿಯಾಗಲು 2034ರವರೆಗೆ ಕಾಯಬೇಕಾಗಬಹುದು ಎಂಬ ಚರ್ಚೆ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು 2029ರ ಸಾರ್ವತ್ರಿಕ ಚುನಾವಣೆಯಲ್ಲೇ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಸಿಗುವಂತೆ ಮಾಡಲು ಸಂವಿಧಾನಾತ್ಮಕ ತಿದ್ದುಪಡಿ ತರಲು ಸಜ್ಜಾಗಿದ್ದಾರೆ.
ಈ ಮಹತ್ವದ ಬದಲಾವಣೆಗೆ ಸಹಕರಿಸುವಂತೆ ಪ್ರಧಾನಿ ಮೋದಿ ಅವರು ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದಾರೆ. “ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಅದರ ನೈಜ ಆಶಯದೊಂದಿಗೆ ಜಾರಿಗೆ ತರುವ ಸಮಯ ಬಂದಿದೆ. ಇದನ್ನು ಜಾರಿಗೊಳಿಸಲು ನಾವೆಲ್ಲರೂ ಒಗ್ಗೂಡಬೇಕಿದೆ,” ಎಂದು ಅವರು ಮನವಿ ಮಾಡಿದ್ದಾರೆ.








