ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಭಾರಿ ತಾಪಮಾನ ಏರಿಕೆ ಆಗಿದ್ದು, ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಕಲ್ಬುರ್ಗಿ ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಬಿಸಿಲಿನಿಂದ ಜನ ಬಸವಳಿದಿದ್ದಾರೆ. ಇದೀಗ ಹವಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಕಲ್ಬುರ್ಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆ ಆಗುವ ಸಾಧ್ಯತೆ ಇದೆ ಎಂದಿದೆ.
ಕಳೆದ 24 ಗಂಟೆಯಲ್ಲಿ ಚಿಕ್ಕಮಂಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಗುರವಾಗಿ ಮಳೆಯಾಗಿದೆ. ಕಲಬುರ್ಗಿಯಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್, ಬಿಜಾಪುರದಲ್ಲಿ 40 , ರಾಯಚೂರಲ್ಲಿ 39, ಬೆಂಗಳೂರಲ್ಲಿ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಕರ್ನಾಟಕದ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಸುಮಾರು 35 ರಿಂದ 37 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಕೂಡಾ ಗರಿಷ್ಠ ಉಷ್ಣಾಂಶ 35 ರಿಂದ 37 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.
ಬೀದರ್, ರಾಯಚೂರು, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಕೆಲವು ಕಡೆ ಗರಿಷ್ಠ ಉಷ್ಣಾಂಶ 41 ರಿಂದ 43 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರ್ಗಿಯಲ್ಲಿ 42 ಡಿಗ್ರಿಯಿಂದ 44 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆ ಇದೆ. ಇನ್ನು ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿಯಿಂದ- 38 ಡಿಗ್ರಿ ಸೆಲ್ಸಿಯಸ್, ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 38 ರಿಂದ 40 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.








