ದಕ್ಷಿಣಕನ್ನಡ : ವಿವಾಹದ ಮೆಹಂದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡಲು ಆರಂಭಿಸಿದ ಯುವಕನೋರ್ವ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ನಡೆದಿದೆ. ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಅಶ್ವಿಥ್ (32) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಸಂಬಂಧಿಕರ ಮದುವೆಯ ಮದರಂಗಿ ಕಾರ್ಯಕ್ರಮದ ಸಂಭ್ರಮ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ನಿರೂಪಣೆ ಮಾಡಲೆಂದು ವೇದಿಕೆಯನ್ನು ಏರಿದಾಗ ಅವರು ಹಠಾತ್ ಕುಸಿದುಬಿದ್ದಿದ್ದಾರೆ. ಕಾರ್ಯಕ್ರಮ ಪ್ರಾರಂಭಿಸುತ್ತಿದ್ದಂತೆ ನಡೆದ ಈ ಘಟನೆಯಿಂದ ಆತಂಕಿತರಾದ ಮನೆಯವರು ಕೂಡಲೇ ಸಮೀಪದ ತುಂಬೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅದಾಗಲೇ ಮೃತಪಟ್ಟಿರುವ ಕುರಿತು ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








