ಶಿವಮೊಗ್ಗ: ಜಾಗತಿಕ ತಾಪಮಾನದ ಏರಿಕೆಯಿಂದ ಮುಕ್ತಿ ಪಡೆಯಲು ಮತ್ತು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಲು ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಸಾಗರ ನಗರ ಬಿಜೆಪಿ ಮಂಡಲದ ಅಧ್ಯಕ್ಷರಾದಂತ ಗಣೇಶ್ ಪ್ರಸಾದ್ ಕೆ.ಆರ್ ಕರೆ ನೀಡಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರ ಏಕ್ ಪೇಡ್ ಮಾ ಕೆ ನಾಮ್ ಕರೆಗೆ ಓಗೊಟ್ಟು ಸಾಗರದ ವಿನೋಬ ನಗರದಲ್ಲಿರುವಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಗಾಯತ್ರಿ ಮಲ್ಲೇಶ್ ಅವರ ನೇತೃತ್ವದ ತಂಡವು ಸಾಗರ ನಗರದ ವಿವಿಧ ಶಾಲೆ-ಕಾಲೇಜುಗಳಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಸಣ್ಣ ಸಣ್ಣ ವಿಚಾರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ದೇಶಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಅದೇ ಹಾದಿಯಲ್ಲಿ ಇಂದು ವಿನೋಬನಗರ ಶಾಲೆಯಲ್ಲಿ ಗಿಡ ನೆಡಲಾಗಿದ್ದು, ನಗರದ ಇತರೆಡೆಗಳಲ್ಲೂ ಈ ಜಾಗೃತಿ ಅಭಿಯಾನ ಮುಂದುವರಿಯಲಿದೆ ಎಂದರು.

ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ವಿನೋಬನಗರದ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿ (SDMC) ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಲಾಯಿತು.

ಪರಿಸರ ಸಂರಕ್ಷಣೆ ಇಂದಿನ ಅಗತ್ಯ: ಮಧುರ ಶಿವಾನಂದ್
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರಾದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದಂತ ಮಧುರ ಶಿವಾನಂದ್ ಅವರು, ಕಳೆದ ಬೇಸಿಗೆಯಲ್ಲಿ ನಾವು ಹಿಂದೆಂದೂ ಕಾಣದಂತಹ ತಡೆದುಕೊಳ್ಳಲು ಸಾಧ್ಯವಾಗದಷ್ಟು ತಾಪಮಾನವನ್ನು ಅನುಭವಿಸಿದ್ದೇವೆ. ವಾತಾವರಣದ ಈ ವೈಪರೀತ್ಯ ಸರಿಯಾಗಬೇಕಾದರೆ ನಾವು ಪರಿಸರವನ್ನು ಉಳಿಸಬೇಕಾಗಿದೆ. ಗಿಡ-ಮರಗಳನ್ನು ನೆಡುವುದರಿಂದ ಮಾತ್ರ ನಮಗೆ ಉತ್ತಮ ಗಾಳಿ ಹಾಗೂ ಹಸಿರು ಪರಿಸರ ಸಿಗಲು ಸಾಧ್ಯ ಎಂದರು.

ಮುಂದುವರಿದು ಮಾತನಾಡಿದ ಅವರು, “ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು, ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ‘ಏಕ್ ಪೇಡ್ ಮಾ ಕೆ ನಾಮ್’ (ತಾಯಿಯ ಹೆಸರಿನಲ್ಲಿ ಒಂದು ಗಿಡ) ಎಂಬ ಶೀರ್ಷಿಕೆಯಡಿ ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಬೇಕು. ಶಾಲಾ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದಂತ ಟಿ.ಡಿ ಮೇಘರಾಜ್, ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು, ಕವಿತಾ ಶರತ್, ಹೇಮಾ ಜೈನ್, ಪದ್ಮಾ ಜೈನ್, ಲತಾ ಗಣೇಶ್, ರಮೇಶ್ ಚೌಟಗಿ, ಎಂ ಆರ್ ಮಹೇಶ್, ಜಗನ್ನಾಥ್ ಶೇಟ್, ರತ್ನಾಕರ ಶೇಟ್, ಗಾಯತ್ರಿ ಮಲ್ಲೇಶ್ ನಾಯಕ್, ವಿನೋದ್ ರಾಜ್, ಲಿಂಗರಾಜ್, ಸತೀಶ್ ಬಾಬು, ರಂಜನಾ ಸುರೇಶ್, ಶ್ವೇತಾ ಸಂತೋಷ್ ಶೇಟ್, ಆದಿತ್ಯ ಸೇರಿದಂತೆ ಶಾಲೆಯ ಶಿಕ್ಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.








