ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ, ಬರುವ ಏಪ್ರಿಲ್ 14, 2026 (ಮಂಗಳವಾರ) ರಂದು ದೇಶಾದ್ಯಂತ ಇರುವ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಈ ರಜೆಯು ಭಾರತದಾದ್ಯಂತ ಇರುವ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಹಾಗೂ ಕೈಗಾರಿಕಾ ಸಂಸ್ಥೆಗಳಿಗೆ (Industrial Establishments) ಅನ್ವಯವಾಗುತ್ತದೆ.
ಆದೇಶದ ವಿವರ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಲ್ಲಾ ಮಂತ್ರಾಲಯಗಳು ಮತ್ತು ಇಲಾಖೆಗಳು ಈ ನಿರ್ಧಾರವನ್ನು ಪಾಲಿಸುವಂತೆ ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಈ ಆದೇಶದ ಪ್ರತಿಯನ್ನು ಸುಪ್ರೀಂ ಕೋರ್ಟ್, ಹೈಕೋರ್ಟ್, ಯುಪಿಎಸ್‌ಸಿ (UPSC), ರೈಲ್ವೆ ಮಂಡಳಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸೇರಿದಂತೆ ಎಲ್ಲಾ ಪ್ರಮುಖ ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ರವಾನಿಸಲಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಗೌರವಪೂರ್ವಕವಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಈ ಕಡ್ಡಾಯ ರಜೆಯನ್ನು ಘೋಷಣೆ ಮಾಡಲಾಗಿದೆ.









