ಬೆಂಗಳೂರು : ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಲೋಡ್ ಟೆಸ್ಟಿಂಗ್ ನಡೆಯಲಿರುವ ಹಿನ್ನೆಲೆಯಲ್ಲಿ ಏ.13ರಿಂದ ಏ.17ರವರೆಗೆ ಫ್ಲೈಓವರ್ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಕೇಬಲ್ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಹಂತದ ‘ಲೋಡ್ ಟೆಸ್ಟಿಂಗ್’ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಏ.13ರಿಂದ ಏ.17ರವರೆಗೆ ಫ್ಲೈಓವರ್ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
ಏ.13ರ ಬೆಳಗ್ಗೆ 5 ಗಂಟೆಯಿಂದ ಏ.17ರ ಬೆಳಗ್ಗೆ 11ಗಂಟೆಯವರೆಗೆ ಕೆನ್ನಮೆಟಲ್ ವಿಡಿಯಾ ಅಪ್ಪರ್ ರಾಂಪ್‌ನಿಂದ ಎಸ್‌ಆರ್‌ಎಸ್ ಡೌನ್ ರಾಂಪ್‌ವರೆಗೆ ಫ್ಲೈಓವರ್‌ನ ಎರಡು ಕಡೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಪರ್ಯಾಯವಾಗಿ ನೆಲಮಂಗಲದಿಂದ ಬೆಂಗಳೂರು ನಗರದ ಕಡೆಗೆ ಬರುವವರು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಕೆಳಗಿನ ಎನ್.ಹೆಚ್.-4 ರಸ್ತೆ ಮತ್ತು ಸರ್ವಿಸ್ ರಸ್ತೆಯನ್ನು ಬಳಸಿ 8ನೇ ಮೈಲಿ ದಾಸರಹಳ್ಳಿ → ಜಾಲಹಳ್ಳಿ ಕ್ರಾಸ್ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಎಸ್‌ಆರ್‌ಎಸ್ ಜಂಕ್ಷನ್ → ಗೊರಗುಂಟೆಪಾಳ್ಯದ ಮೂಲಕ ಸಂಚರಿಸಬಹುದು.
ಸಿಎಂಟಿಐ ಕಡೆಯಿಂದ ನೆಲಮಂಗಲ ಕಡೆಗೆ ಹೋಗುವವರು ಫ್ಲೈಓವರ್ ಕೆಳಗಿನ ಎನ್.ಹೆಚ್-4 ರಸ್ತೆ ಮತ್ತು ಸರ್ವಿಸ್ ರಸ್ತೆಯ ಮೂಲಕ ಎಸ್‌ಆರ್‌ಎಸ್ ಜಂಕ್ಷನ್ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಜಾಲಹಳ್ಳಿ ಕ್ರಾಸ್ → ದಾಸರಹಳ್ಳಿ 8ನೇ ಮೈಲಿ → ಪಾರ್ಲೆ ಜಿ ಟೋಲ್ ಮೂಲಕ ಪ್ರಯಾಣಿಸಬಹುದು. ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಈ ಲೋಡ್ ಟೆಸ್ಟಿಂಗ್ ಅತ್ಯಗತ್ಯವಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಸಹಕರಿಸಬೇಕೆಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಕೋರಿದೆ.








