ಇಸ್ಲಾಮಾಬಾದ್: ಕಳೆದ ಆರು ವಾರಗಳಿಂದ ನಡೆಯುತ್ತಿರುವ ಭೀಕರ ಯುದ್ಧಕ್ಕೆ ಅಂತ್ಯ ಹಾಡಲು ಪಾಕಿಸ್ತಾನದ ಇಸ್ಲಾಮಾಬಾದ್ ಈಗ ವೇದಿಕೆಯಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ 14 ದಿನಗಳ ತಾತ್ಕಾಲಿಕ ಕದನ ವಿರಾಮದ (Ceasefire) ಅವಧಿಯಲ್ಲೇ ಶಾಶ್ವತ ಶಾಂತಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ಉನ್ನತ ಮಟ್ಟದ ತಂಡ ಇಂದು ಇಸ್ಲಾಮಾಬಾದ್‌ಗೆ ಆಗಮಿಸಿದೆ.
ವಿದೇಶಿ ಮಿಲಿಟರಿ ಹಸ್ತಕ್ಷೇಪಗಳನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ಜೆಡಿ ವ್ಯಾನ್ಸ್, ಈಗ ಈ ಯುದ್ಧವನ್ನು ಕೊನೆಗಾಣಿಸುವ ಟ್ರಂಪ್ ಅವರ ‘ಟ್ರಂಪ್ ಕಾರ್ಡ್’ ಆಗಿದ್ದಾರೆ. “ಇರಾನ್ ಪ್ರಾಮಾಣಿಕವಾಗಿ ಮಾತುಕತೆಗೆ ಬಂದರೆ ನಾವು ಕೈಜೋಡಿಸಲು ಸಿದ್ಧ, ಆದರೆ ನಮ್ಮನ್ನು ಆಟವಾಡಿಸಲು ನೋಡಿದರೆ ಪರಿಣಾಮ ನೆಟ್ಟಗಿರಲ್ಲ” ಎಂದು ವ್ಯಾನ್ಸ್ ಪಾಕಿಸ್ತಾನಕ್ಕೆ ಹೊರಡುವ ಮುನ್ನವೇ ಎಚ್ಚರಿಕೆ ನೀಡಿದ್ದಾರೆ.
ಈ ಸಂಧಾನಕ್ಕೆ ದೊಡ್ಡ ಅಡ್ಡಿಯಾಗಿರುವುದು ಲೆಬನಾನ್ ವಿಚಾರ. ಇಸ್ರೇಲ್ ಲೆಬನಾನ್ ಮೇಲಿನ ಬಾಂಬ್ ದಾಳಿಯನ್ನು ನಿಲ್ಲಿಸದಿದ್ದರೆ ನಾವು ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಇರಾನ್ ಪಟ್ಟು ಹಿಡಿದಿದೆ. ಆದರೆ, ಇದು ಕೇವಲ ಅಮೆರಿಕಾ-ಇರಾನ್ ನಡುವಿನ ಒಪ್ಪಂದವಾಗಿದ್ದು, ಲೆಬನಾನ್ ಇದಕ್ಕೆ ಸಂಬಂಧಿಸಿಲ್ಲ ಎಂಬುದು ಅಮೆರಿಕಾದ ವಾದ.
ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವುದು ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಬ್ರೇಕ್ ಹಾಕುವುದು ಈ ಮಾತುಕತೆಯ ಪ್ರಮುಖ ಉದ್ದೇಶವಾಗಿದೆ. ಒಂದು ವೇಳೆ ಈ 14 ದಿನಗಳಲ್ಲಿ ಒಪ್ಪಂದ ಯಶಸ್ವಿಯಾಗದಿದ್ದರೆ, ಇರಾನ್ ಮೇಲೆ ಬೃಹತ್ ದಾಳಿ ನಡೆಸುವುದಾಗಿ ಟ್ರಂಪ್ ಈಗಾಗಲೇ ಎಚ್ಚರಿಸಿದ್ದಾರೆ.








