ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ ಹಣವನ್ನು ಖಾಸಗಿ ಫೈನಾನ್ಸ್ ಕಂಪನಿಗಳು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲದ ಬಾಕಿ ನೆಪದಲ್ಲಿ ಕಡಿತಗೊಳಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣವನ್ನು ಫಲಾನುಭವಿಗಳಿಗೆ ಗೊತ್ತಿಲ್ಲದಂತೆ ಅವರ ಖಾತೆಯಿಂದ ಫೈನಾನ್ಸ್ ಕಂಪನಿಗಳು ಕಡಿತ ಮಾಡಿಕೊಳ್ಳುತ್ತಿರುವ ಬಗ್ಗೆ ಗ್ಯಾರಂಟಿ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ, ಶಾಸಕ ದಿನೇಶ್ ಗೂಳಿಗೌಡ, ಸಿಎಂ ಮತ್ತು ಡಿಸಿಎಂಗೆ ಪತ್ರ ಬರೆದು ಗಮನಕ್ಕೆ ತಂದಿದ್ದರು. ಈ ಕುರಿತು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚನೆ ನೀಡಲು ಮುಖ್ಯ ಕಾರ್ಯದರ್ಶಿಗೆ ಸಿಎಂ ಆದೇಶಿಸಿದ್ದಾರೆ. ಸಿಎಂ ಸೂಚನೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಶಾಲಿನಿ ರಜನೀಶ್, ಗೃಹ ಇಲಾಖೆ, ನಗರಾಭಿವೃದ್ಧಿ ಇಲಾಖೆ ಮತ್ತು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳಿಗೆ ಪತ್ರ ಬರೆದು ತುರ್ತು ಕ್ರಮಕ್ಕೆ ಸೂಚಿಸಿದ್ದಾರೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು, ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ 2 ಸಾವಿರ ರೂ. ಜಮೆ ಮಾಡಲಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಜೀವನಕ್ಕೆ ಆಸರೆಯಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಕೆಲವು ಖಾಸಗಿ ಫೈನಾನ್ ಕಂಪನಿಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು ಸ್ತ್ರೀಶಕ್ತಿ ಸಂಘಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾದ ಕೂಡಲೇ, ಹಳೆಯ ಸಾಲದ ಬಾಕಿ ಅಥವಾ ಬಡ್ಡಿಯ ನೆಪದಲ್ಲಿ ಹಣವನ್ನು ಬಲವಂತವಾಗಿ ಕಡಿತಗೊಳಿಸುತ್ತಿವೆ.
ಕೆಲವು ಕಡೆಗಳಲ್ಲಿ ಬ್ಯಾಂಕ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಥವಾ ಫಲಾನುಭವಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ. ಸರ್ಕಾರವು ಮಹಿಳೆಯರ ವೈಯಕ್ತಿಕ ಖರ್ಚು ಮತ್ತು ಸ್ವಾವಲಂಬನೆಗಾಗಿ ಗೃಹಲಕ್ಷ್ಮಿ ಹಣ ನೀಡುತ್ತಿದೆ. ಇದನ್ನು ಸಾಲದ ಮರುಪಾವತಿಗೆ ಮುಟ್ಟುಗೋಲು ಹಾಕಿಕೊಳ್ಳುವುದು ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತಂದಂತಾಗುತ್ತದೆ ಎಂದು ದಿನೇಶ್ ಗೂಳಿಗೌಡ ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ಸಂಬಂಧ ದೂರು ನೀಡಲು ಪ್ರತ್ಯೇಕ ಸಹಾಯವಾಣಿ ಅಥವಾ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಮಿತಿ ರಚಿಸಬೇಕು. ಫಲಾನುಭವಿಗಳ ಅನುಮತಿ ಇಲ್ಲದೆ, ಹಣ ಕಡಿತಗೊಳಿಸುವ ಸಂಸ್ಥೆಗಳ ವಿರುದ್ಧ ಪರವಾನಗಿ ರದ್ಧತಿಯಂತಹ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ್ದರು.








