ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಾಯ್ದೆ 1966ರಡಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿದೆ. ಶುಕ್ರವಾರ ಪ್ರಕಟಿಸಲಾದ ನೂತನ ಕರಡು ನಿಯಮಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೊದಲ ನಿಯಮಗಳು (ಎರಡನೇ ತಿದ್ದುಪಡಿ)-2026 ಎಂದು ಕರೆಯಲಾಗಿದ್ದು, ಇವು 2025-26ನೇ ಸಾಲಿನ ಪರೀಕ್ಷೆಯಿಂದಲೇ ಜಾರಿಗೆ ಬರಲಿವೆ.
ಮುಖ್ಯ ಬದಲಾವಣೆಯೆಂದರೆ, ಇನ್ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮತ್ತು ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ವಿಷಯಗಳ ಅಂಕಗಳನ್ನು ಕೇವಲ ಗ್ರೇಡ್ (ಶ್ರೇಣಿ) ರೂಪದಲ್ಲಿ ನೀಡಲಾಗುತ್ತದೆ. ಈ ವಿಷಯಗಳನ್ನು ಅಂಕಪಟ್ಟಿಯಲ್ಲಿ ಹೆಚ್ಚುವರಿ ವಿಷಯಗಳೆಂದು ಪರಿಗಣಿಸಲಾಗುತ್ತದೆಯೇ ಹೊರತು, ವಿದ್ಯಾರ್ಥಿಯ ಉತ್ತೀರ್ಣ ಅಥವಾ ಅನುತ್ತೀರ್ಣತೆ ನಿರ್ಧರಿಸಲು ಪರಿಗಣಿಸುವುದಿಲ್ಲ.
ಗ್ರೇಡಿಂಗ್ ವ್ಯವಸ್ಥೆ ಬಗ್ಗೆ ಅಧಿಸೂಚನೆಯಲ್ಲಿ ಸ್ಪಷ್ಟನೆ ನೀಡಲಾಗಿದ್ದು, ತೃತೀಯ ಭಾಷೆ ಅಥವಾ ಎನ್‌ಎಸ್ ಕ್ಯೂಎಫ್ ವಿಷಯಗಳಲ್ಲಿ ಶೇ.80ರಿಂದ 100 ಅಂಕ ಗಳಿಸಿದರೆ ‘ಎ’ ಗ್ರೇಡ್, ಶೇ.50 ರಿಂದ 79 ಅಂಕಗಳಿಗೆ ‘ಬಿ’ ಗ್ರೇಡ್ ಮತ್ತು ಶೇ.49 ರವರೆಗೆ ಅಂಕ ಗಳಿಸಿದರೆ ‘ಸಿ’ ಗ್ರೇಡ್ ನೀಡಲಾಗುತ್ತದೆ.
ಉತ್ತೀರ್ಣರಾಗಲು ಬೇಕಾದ ಅಂಕಗಳ ಕುರಿತು ಹೊಸ ಮಾನದಂಡ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಒಟ್ಟು 525 ಅಂಕಗಳಲ್ಲಿ ಕನಿಷ್ಠ 173 ಅಂಕ ಗಳಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.30 ಅಂಕ ಗಳಿಸಿರಬೇಕು ಹಾಗೂ ಆಂತರಿಕ ಮತ್ತು ಬಾಹ್ಯ ಪರೀಕ್ಷೆಗಳನ್ನು ಸೇರಿಸಿ ಒಟ್ಟಾರೆಯಾಗಿ ಶೇ.33 ಅಂಕಗಳನ್ನು ಪಡೆದವರನ್ನು ಮಾತ್ರ ‘ಉತ್ತೀರ್ಣ’ ಎಂದು ಘೋಷಿಸಲಾಗುತ್ತದೆ.
ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಸರ್ಕಾರವು 7 ದಿನಗಳ ಕಾಲಾವಕಾಶ ನೀಡಿದೆ. ಆಸಕ್ತರು ತಮ್ಮ ಅನಿಸಿಕೆಗಳನ್ನು ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೀಧಿಯಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಬಹುದಾಗಿದೆ.








