ಜೆರುಸಲೇಂ: ಇರಾನ್ ಜೊತೆಗಿನ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಹೇರಲಾಗಿದ್ದ ‘ಯುದ್ಧಕಾಲದ ತುರ್ತು ಪರಿಸ್ಥಿತಿ’ ಮತ್ತು ನ್ಯಾಯಾಂಗ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಇದರ ಬೆನ್ನಲ್ಲೇ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಹುದಿನಗಳ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯನ್ನು ಈ ಭಾನುವಾರದಿಂದ (ಏಪ್ರಿಲ್ 12) ಪುನಾರಂಭಿಸಲು ಇಸ್ರೇಲ್ ನ್ಯಾಯಾಲಯ ಆದೇಶಿಸಿದೆ.
ಫೆಬ್ರವರಿ 28 ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ವೈಮಾನಿಕ ದಾಳಿಯ ನಂತರ ಇಸ್ರೇಲ್‌ನಲ್ಲಿ ಶಾಲಾ-ಕಾಲೇಜು ಮತ್ತು ನ್ಯಾಯಾಲಯಗಳಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟ ಹಿನ್ನೆಲೆಯಲ್ಲಿ, ಇಸ್ರೇಲ್‌ನ ಸೇನಾ ಕಮಾಂಡ್ ಸುರಕ್ಷತಾ ನಿಯಮಗಳನ್ನು ಸಡಿಲಗೊಳಿಸಿದೆ. ಹೀಗಾಗಿ ಸ್ಥಗಿತಗೊಂಡಿದ್ದ ನ್ಯಾಯಾಂಗ ಪ್ರಕ್ರಿಯೆಗಳು ಮತ್ತೆ ಹಳಿಗೆ ಬಂದಿವೆ.
“ಅಮೆರಿಕದ ನಡೆ ಮೂರ್ಖತನದ್ದು”
ಇದೇ ವೇಳೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಎಕ್ಸ್ (X) ಖಾತೆಯಲ್ಲಿ ಅಮೆರಿಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ:”ನೆತನ್ಯಾಹುಗೆ ರಾಜತಾಂತ್ರಿಕತೆಯನ್ನು (Diplomacy) ಹತ್ಯೆ ಮಾಡಲು ಅವಕಾಶ ನೀಡುವ ಮೂಲಕ ಅಮೆರಿಕ ತನ್ನ ಆರ್ಥಿಕತೆಯನ್ನು ತಾನೇ ನಾಶಪಡಿಸಿಕೊಳ್ಳುತ್ತಿದೆ. ಇದು ಅತ್ಯಂತ ಮೂರ್ಖತನದ ನಿರ್ಧಾರ” ಎಂದು ಅವರು ಟೀಕಿಸಿದ್ದಾರೆ.
ನೆತನ್ಯಾಹು ಅವರು ತಮ್ಮ ಮೇಲಿನ ಭ್ರಷ್ಟಾಚಾರದ ತನಿಖೆಯನ್ನು ತಪ್ಪಿಸಿಕೊಳ್ಳಲು ಮತ್ತು ಜೈಲು ಶಿಕ್ಷೆಯಿಂದ ಪಾರಾಗಲು ಈ ಯುದ್ಧವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಇರಾನ್ ಆರೋಪಿಸಿದೆ.
ನೆತನ್ಯಾಹು ಅವರು ಲಂಚ ಸ್ವೀಕಾರ, ವಂಚನೆ ಮತ್ತು ನಂಬಿಕೆ ದ್ರೋಹದಂತಹ ಮೂರು ಪ್ರತ್ಯೇಕ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. 2020 ರಿಂದ ನಡೆಯುತ್ತಿರುವ ಈ ವಿಚಾರಣೆಯು ಯುದ್ಧ ಮತ್ತು ಅಧಿಕೃತ ಜವಾಬ್ದಾರಿಗಳ ನೆಪದಲ್ಲಿ ಪದೇ ಪದೇ ವಿಳಂಬವಾಗುತ್ತಿತ್ತು. ಇದೀಗ ತುರ್ತು ಪರಿಸ್ಥಿತಿ ಮುಗಿದಿರುವುದರಿಂದ ಅವರು ನ್ಯಾಯಾಲಯಕ್ಕೆ ಹಾಜರಾಗುವುದು ಅನಿವಾರ್ಯವಾಗಿದೆ.








