ಪುಣೆ: ಕುಟುಂಬದೊಂದಿಗೆ ಸಂತೋಷದಿಂದ ಕಳೆಯಲೆಂದು ಹೋದ ಪ್ರವಾಸವೊಂದು ಮಹಿಳೆಯೊಬ್ಬರ ಜೀವನವನ್ನೇ ಕತ್ತಲೆಗೆ ದೂಡಿದ ಘಟನೆ ಪುಣೆ ಸಮೀಪದ ಆಗ್ರೋ ಟೂರಿಸಂ ಕೇಂದ್ರದಲ್ಲಿ ನಡೆದಿದೆ. ವಾಟರ್ ಸ್ಲೈಡ್ನಲ್ಲಿ ಸಂಭವಿಸಿದ ಭೀಕರ ಅಪಘಾತದಿಂದಾಗಿ 37 ವರ್ಷದ ಅಶ್ವಿನಿ ಸಂದೀಪ್ ನಾಪ್ತೆ ಎಂಬುವವರು ಪಾರ್ಶ್ವವಾಯು (Paralysis) ಪೀಡಿತರಾಗಿದ್ದಾರೆ.
ನಡೆದಿದ್ದೇನು?
ಅಶ್ವಿನಿ ಅವರು ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಪುಣೆ ಸಮೀಪದ ರೆಸಾರ್ಟ್ಗೆ ವಿಹಾರಕ್ಕೆ ತೆರಳಿದ್ದರು. ಅಲ್ಲಿನ ವಾಟರ್ ಸ್ಲೈಡ್ನಲ್ಲಿ ಆಟವಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ವರದಿಗಳ ಪ್ರಕಾರ, ವಾಟರ್ ಸ್ಲೈಡ್ನ ಕೊನೆಯಲ್ಲಿ ಇರಬೇಕಾದ ನೀರಿನ ಮಟ್ಟ ಅತ್ಯಂತ ಕಡಿಮೆ ಇತ್ತು. ಅಶ್ವಿನಿ ಅವರು ಸ್ಲೈಡ್ನಿಂದ ವೇಗವಾಗಿ ಬಂದಾಗ, ನೀರಿನ ಆಳ ಸಾಕಷ್ಟಿಲ್ಲದ ಕಾರಣ ಅವರು ನೇರವಾಗಿ ನೆಲಕ್ಕೆ ಬಲವಾಗಿ ಅಪ್ಪಳಿಸಿದರು.
ಬದುಕನ್ನೇ ಕಿತ್ತುಕೊಂಡ ಪೆಟ್ಟು
ಈ ಭೀಕರ ಪೆಟ್ಟಿನಿಂದಾಗಿ ಅಶ್ವಿನಿ ಅವರು ತಕ್ಷಣವೇ ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷೆ ನಡೆಸಿದ ವೈದ್ಯರು ಅಶ್ವಿನಿ ಅವರ ಬೆನ್ನುಹುರಿಗೆ (Spinal Cord) ತೀವ್ರವಾದ ಪೆಟ್ಟು ಬಿದ್ದಿರುವುದನ್ನು ಖಚಿತಪಡಿಸಿದ್ದಾರೆ. ಇದರ ಪರಿಣಾಮವಾಗಿ ಅವರ ದೇಹದ ಕೆಳಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿದ್ದು, ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ.








