ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ಎರಡು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಡಿಜಿಟಲ್ ಅಂಕಪಟ್ಟಿ ವಿತರಣೆ
2027ರ ಶೈಕ್ಷಣಿಕ ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಮುದ್ರಿತ (Physical) ಅಂಕಪಟ್ಟಿಗಳನ್ನು ನೀಡುವುದಿಲ್ಲ. ಬದಲಾಗಿ ಸಂಪೂರ್ಣವಾಗಿ ಡಿಜಿಟಲ್ ಅಂಕಪಟ್ಟಿಗಳನ್ನು ಮಾತ್ರ ವಿತರಿಸಲು ನಿರ್ಧರಿಸಲಾಗಿದೆ.
ಡೌನ್‌ಲೋಡ್ ವಿಧಾನ: ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಡಿಜಿ ಲಾಕರ್ (DigiLocker) ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವರ್ಷದ ಫಲಿತಾಂಶ ಬಂದ ದಿನವೇ ಡಿಜಿ ಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
ಈ ಬಾರಿ ‘ಪರೀಕ್ಷೆ-3’ ರದ್ದು
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ವರ್ಷ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ, ಈ ಬಾರಿ ಪರೀಕ್ಷೆ-3 ಅನ್ನು ನಡೆಸದಿರಲು ಸರ್ಕಾರ ತೀರ್ಮಾನಿಸಿದೆ.
ಪರೀಕ್ಷೆ-1ರಲ್ಲಿ ಈ ಬಾರಿ ಐತಿಹಾಸಿಕ ಫಲಿತಾಂಶ ಬಂದಿದೆ. ಅಲ್ಲದೆ, ಕಳೆದ ಬಾರಿ ಪರೀಕ್ಷೆ-2ರಲ್ಲಿ ಶೇ. 8ರಷ್ಟು ಫಲಿತಾಂಶ ಸುಧಾರಿಸಿದ್ದರೆ, ಪರೀಕ್ಷೆ-3ರಲ್ಲಿ ಕೇವಲ ಶೇ. 1ರಷ್ಟು ಮಾತ್ರ ಪ್ರಗತಿ ಕಂಡುಬಂದಿತ್ತು.
ಪರೀಕ್ಷೆ-3ರ ಫಲಿತಾಂಶ ಬರುವಷ್ಟರಲ್ಲಿ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತು ಕಾಲೇಜು ದಾಖಲಾತಿಗಳು ಬಹುತೇಕ ಪೂರ್ಣಗೊಂಡಿರುತ್ತವೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸದ್ಯಕ್ಕೆ ಈ ವರ್ಷ ಮಾತ್ರ ಪರೀಕ್ಷೆ-3 ಅನ್ನು ಕೈಬಿಡಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.








