ಟೆಹ್ರಾನ್:ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ 15 ದಿನಗಳ ಕದನ ವಿರಾಮವು ಕೇವಲ 48 ಗಂಟೆಗಳಲ್ಲಿ ಹಳಿ ತಪ್ಪುವ ಲಕ್ಷಣಗಳು ಕಾಣಿಸುತ್ತಿವೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗಳಿಂದ ಕೆರಳಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, “ಒಂದು ವೇಳೆ ಲೆಬನಾನ್‌ನಲ್ಲಿ ರಕ್ತಪಾತ ಮುಂದುವರಿದರೆ ಅಮೆರಿಕದೊಂದಿಗೆ ನಡೆಸಲಿರುವ ಮಾತುಕತೆಗಳು ಅರ್ಥಹೀನವಾಗಲಿವೆ” ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಸೈನ್ಯದ ಕೈಗಳು ಬಂದೂಕಿನ ಟ್ರಿಗ್ಗರ್ ಮೇಲೆಯೇ ಇವೆ ಎಂದು ಎಚ್ಚರಿಸಿರುವ ಅಧ್ಯಕ್ಷರು, ಇಸ್ರೇಲ್‌ನ ಈ ದಾಳಿಗಳು ಕದನ ವಿರಾಮ ಒಪ್ಪಂದದ ನೇರ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಲೆಬನಾನ್ ಪ್ರತ್ಯೇಕವಲ್ಲ: ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘೆರ್ ಕ್ವಾಲಿಬಾಫ್ ಮಾತನಾಡಿ, “ಲೆಬನಾನ್ ಈ ಕದನ ವಿರಾಮದ ಅವಿಭಾಜ್ಯ ಅಂಗ. ಲೆಬನಾನ್ ಅನ್ನು ಹೊರಗಿಟ್ಟು ಯಾವುದೇ ಒಪ್ಪಂದ ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶನಿವಾರದಿಂದ ಅಮೆರಿಕ ಮತ್ತು ಇರಾನ್ ನಡುವೆ ನೇರ ಮಾತುಕತೆ ನಡೆಯಬೇಕಿದೆ. ಆದರೆ, ಇಸ್ರೇಲ್‌ನ ದಾಳಿಗಳು ಈ ಮಾತುಕತೆಯನ್ನು ಅತಂತ್ರಗೊಳಿಸಿವೆ.
ಒಂದು ಕಡೆ ಶಾಂತಿ ಮಾತುಕತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಲೆಬನಾನ್‌ನಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದು ಇಡೀ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ.








