ಬೆಂಗಳೂರು : ಈ ಹಿಂದೆ ದುಬೈ ನಿಂದ 14 ಕೆಜಿಗೆ ಅಧಿಕ ಚಿನ್ನಭರಣ ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಇದ್ದಾರೆ. ಇದೀಗ ಇದೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5 ಕೋಟಿಗು ಅಧಿಕ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು DRI ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಹೌದು ಏರ್ಪೋರ್ಟ್ ನ ಟರ್ಮಿನಲ್ -2 ರ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕಳ್ಳಸಾಗಣೆಯ ಗ್ಯಾಂಗ್ ಚಿನ್ನವನ್ನು ಕಳ್ಳಸಾಗಣೆ ಮಾಡಲು ಮುಂದಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ಐವರು ಆರೋಪಿಗಳನ್ನು ಪರಿಶೀಲನೆ ನಡೆಸಿ ಅವರಿಂದ 5 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಹಾಗೂ ಕ್ಯಾಪ್ಸುಲ್ ಆಕಾರದ ಪ್ಯಾಕೆಟ್‌ಗಳಲ್ಲಿ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ ಗಡಿಯಾಚೆಗಿನ ಕಳ್ಳಸಾಗಣೆಯ ಸಿಂಡಿಕೇಟ್‌ನ ಭಾಗವಾಗಿದೆ ಎಂದು ಕಂಡು ಬಂದಿದೆ. ಇದರಲ್ಲಿ ವಿದೇಶಿಯರು-ಬಾಂಗ್ಲಾದೇಶಿ ಪ್ರಜೆಗಳು ಇರುವ ಶಂಕೆ ಇದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಪ್ರಮುಖ ಕಿಂಗ್‌ಪಿನ್‌ಗಳು ಹಾಗೂ ಈ ನೆಟ್‌ವರ್ಕ್ ಅನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶದ ಪ್ರಜೆಗಳು ಸ್ಥಳೀಯರ ಸಹಕಾರದೊಂದಿಗೆ ಚಿನ್ನ ಕಳ್ಳಸಾಗಣೆ ಮಾಡಲು ಮುಂದಾಗಿದ್ದರು. ಅದರಂತೆ ಚಿನ್ನವನ್ನು ದೇಹದ ವಿವಿಧ ಅಂಗಗಳಲ್ಲಿ ಮರೆಮಾಚಿಕೊಂಡು ಶೌಚಾಲಯಗಳು ಮತ್ತು ಧೂಮಪಾನ ವಲಯಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಪಾಸ್‌ಕೋಡ್ ಬಳಸಿಕೊಂಡು ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಚಿನ್ನವನ್ನು ವರ್ಗಾಯಿಸಲು ಮುಂದಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.








