ನವದೆಹಲಿ: ದೆಹಲಿ ವಿಧಾನಸಭೆಯ (Delhi Assembly) ಭದ್ರತಾ ಕವಚವನ್ನು ಭೇದಿಸಿ ಒಳನುಗ್ಗಿದ್ದ ವ್ಯಕ್ತಿಯ ವಿಚಾರಣೆಯಿಂದ ಈಗ ಆಘಾತಕಾರಿ ಸತ್ಯವೊಂದು ಹೊರಬಿದ್ದಿದೆ. ಮಾಸ್ಕ್ ಧರಿಸಿ ಕಾರು ಚಲಾಯಿಸುತ್ತಾ ವಿಧಾನಸಭೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಉತ್ತರ ಪ್ರದೇಶ ಮೂಲದ ಸರಬ್ಜಿತ್ ಸಿಂಗ್, ವಿಧಾನಸಭೆಯ ನಂತರ ನೇರವಾಗಿ ದೇಶದ ಸಂಸತ್ ಭವನಕ್ಕೆ (Parliament) ನುಗ್ಗಲು ಸಂಚು ರೂಪಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೆಹಲಿ ವಿಧಾನಸಭೆಯಲ್ಲಿ ತನ್ನ ‘ಹೂಗುಚ್ಛ’ದ ನಾಟಕ ಮುಗಿಸಿ ಹೊರಬಂದ ಸರಬ್ಜಿತ್ ಸಿಂಗ್, ರೂಪನಗರ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದನು. ಈ ವೇಳೆ ಆತನೊಂದಿಗೆ ಇದ್ದ ಇಬ್ಬರು ಟ್ಯಾಕ್ಸಿ ಚಾಲಕರಿಗೆ ಹಣ ನೀಡಿ, ಸಂಸತ್ ಭವನಕ್ಕೆ ಹೋಗುವ ದಾರಿ ತೋರಿಸುವಂತೆ ಕೇಳಿಕೊಂಡಿದ್ದ ಎಂಬುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಸೋಮವಾರ (ಏಪ್ರಿಲ್ 6) ಮಧ್ಯಾಹ್ನ ಸುಮಾರು 2 ಗಂಟೆಗೆ ತನ್ನ ಟಾಟಾ ಸಿಯೆರಾ ಎಸ್‌ಯುವಿ ಕಾರಿನೊಂದಿಗೆ ಬಂದಿದ್ದ ಆರೋಪಿ, ವಿವಿಐಪಿ ಗೇಟ್ ಸಂಖ್ಯೆ 2ರ ಬ್ಯಾರಿಯರ್ ಅನ್ನು ಮುರಿದು ಒಳನುಗ್ಗಿದ್ದನು. ಬಳಿಕ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಾರಿನ ಮೇಲೆ ಹೂಗುಚ್ಛ ಮತ್ತು ಹೂವಿನ ಹಾರವನ್ನು ಇಟ್ಟು ನಾಟಕೀಯವಾಗಿ ಅಲ್ಲಿಂದ ಪರಾರಿಯಾಗಿದ್ದನು.
37 ವರ್ಷದ ಈ ಆರೋಪಿ ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿಯಾಗಿದ್ದು, ಕಳೆದ ಐದು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದನು. ಈತ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು, ಶಹಜಹಾನ್‌ಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ.
ಈತ ಒಬ್ಬನೇ ಈ ಕೃತ್ಯ ಎಸಗಿದ್ದಾನೆಯೇ ಅಥವಾ ಇದರ ಹಿಂದೆ ಯಾವುದಾದರೂ ಸಂಘಟನೆಯ ಕೈವಾಡವಿದೆಯೇ ಎಂಬ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಯನ್ನು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.








