ಮಂಡ್ಯ : ಮದ್ದೂರು ಕ್ಷೇತ್ರದಲ್ಲಿ ಅಪೂರ್ಣ ಮತ್ತು ಹೊಸ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಅನುದಾನ ನೀಡುವಂತೆ ಹಲವು ಬಾರಿ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದರು ಸಹ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕ ಕೆ.ಎಂ.ಉದಯ್ ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಮಾಲಗಾರನಹಳ್ಳಿ ಹಾಗೂ ನಗರಕೆರೆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ 1 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ನಗರಕೆರೆ ಗ್ರಾಮದ ದಲಿತ ಮುಖಂಡರು ನಮ್ಮ ಗ್ರಾಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದ ವೇಳೆ ಮಾತನಾಡಿದ ಶಾಸಕ ಉದಯ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭವನಗಳು ಅನುದಾನದ ಕೊರತೆಯಿಂದ ಅಪೂರ್ಣಗೊಂಡಿದ್ದು, ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ. ಮಹದೇವಪ್ಪ ಅವರಿಗೆ ಅನುದಾನ ಬಿಡುಗಡೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸಹ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಮತ್ತೋಮ್ಮೆ ಸಚಿವರನ್ನು ಭೇಟಿ ಮಾಡಿ ಅಪೂರ್ಣ ಮತ್ತು ಹೊಸ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇನ್ನು ಮದ್ದೂರು ನಗರಸಭೆ ಕಛೇರಿ ಎದುರು ಸೋಮವಾರ ಗೆಜ್ಜಲಗೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಉದಯ್ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ನಗರಸಭೆಗೆ ಸೇರ್ಪಡೆ ಮಾಡಿರುವ ವಿಚಾರವಾಗಿ ಈಗಾಗಲೇ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಲೆಬೇಕು. ಆದರೆ, ನಗರಸಭೆ ಕಛೇರಿಗೆ ಅನಧಿಕೃತವಾಗಿ ಮುತ್ತಿಗೆ ಹಾಕಿ ಬೆಂಕಿ ಹಚ್ಚಿ ಪ್ರತಿಭಟಿಸಿ ಈ ರೀತಿ ಗೂಂಡಾವರ್ತನೆ ಮಾಡುವುದು ಎಷ್ಟು ಸರಿ. ಗ್ರಾಮಸ್ಥರೇ ಹೋರಾಟ ಮಾಡಿದ್ದರೇ ಪ್ರತಿಭಟನಾ ಸ್ಥಳಕ್ಕೆ ನಾನು ಭೇಟಿ ನೀಡಿ ಮನವಿ ಆಲಿಸಿ ಗ್ರಾಮ ಪಂಚಾಯಿತಿಯನ್ನು ಕೈ ಬಿಡುವ ವಿಚಾರವನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತಿದ್ದೆ. ಆದರೆ, ವಿರೋಧ ಪಕ್ಷಗಳ ಜೊತೆಗೆ ಸೇರಿಕೊಂಡು ಪ್ರತಿಭಟನೆಯ ಮಹತ್ವವನ್ನು ಗ್ರಾಮದ ಕೆಲವರು ಹಾಳು ಮಾಡಿದ್ದಾರೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಪ್ರತಿಭಟನೆ ಸ್ಥಳಕ್ಕೆ ಹೋಗುವ ಆಲೋಚನೆಯೂ ಇಲ್ಲ. ಯಾವುದೇ ಕಾರಣಕ್ಕೂ ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಯಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಉದಯ್ ಸ್ಪಷ್ಟಪಡಿಸಿದರು.
ಇದೇ ವೇಳೆ ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಸಂದರ್ಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಚರಣ್, ತಾ.ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಮುಖಂಡರಾದ ಚಂದ್ರಹಾಸ್, ಅಜ್ಜಹಳ್ಳಿ ಮನು, ಪುಟ್ಟರಾಮು, ಜಯಲಿಂಗು, ಲಿಂಗಪ್ಪ, ಪ್ರವೀಣ್, ರೀತೇಶ್, ನಾಗರಾಜ್, ಅಭಿ, ಪ್ರದೀಪ್, ಜಯರಾಂ, ಚಿಕ್ಕಣ್ಣ ಅನಿ, ಶಿಲ್ಪಾ, ಕೃಷ್ಣ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮಹಾಲಕ್ಷ್ಮಿ ಮುಂದೆ ಒಂದೇ ಕರೆನ್ಸಿ ನೋಟಿನಲ್ಲಿ ಹೀಗೆ ಮಾಡಿ, ನಿಮ್ಮ ಆದಾಯವು 3 ಪಟ್ಟು ಹೆಚ್ಚುತ್ತೆ
ಚಿಕ್ಕಜಾಜೂರು ಪಿಎಸ್ಐ ಸಿಬ್ಬಂದಿಗೆ ‘ಬಿಸಿಲ ಶಿಕ್ಷೆ’ ನೀಡಿದ್ದೇಕೆ? ಅಸಲಿ ಸತ್ಯ, ಕಾರಣ ಇಲ್ಲಿದೆ ಓದಿ!








