ಮೊಹಾಲಿ: ಪಂಜಾಬ್‌ನ ಮೊಹಾಲಿಯಲ್ಲಿರುವ ನ್ಯಾಯಾಲಯದ ಸಂಕೀರ್ಣಗಳಿಗೆ ಬಾಂಬ್ ಇಟ್ಟಿರುವುದಾಗಿ ಬಂದ ಅನಾಮಧೇಯ ಬೆದರಿಕೆಯು ಭಾರಿ ಸಂಚಲನ ಮೂಡಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ನ್ಯಾಯಾಲಯದ ಆವರಣವನ್ನು ತಕ್ಷಣವೇ ತೆರವುಗೊಳಿಸಲಾಗಿದ್ದು (Evacuation), ಸದ್ಯಕ್ಕೆ ಎಲ್ಲಾ ನ್ಯಾಯಾಂಗ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ.
ಮೊಹಾಲಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂಬ ಸಂದೇಶ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪುತ್ತಿದ್ದಂತೆಯೇ ಆತಂಕ ಮನೆಮಾಡಿದೆ.ಪೊಲೀಸರು ಮತ್ತು ಬಾಂಬ್ ಪತ್ತೆ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ನ್ಯಾಯಾಧೀಶರು, ವಕೀಲರು ಮತ್ತು ಸಾರ್ವಜನಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದ್ದಾರೆ.
ಸ್ನಿಫರ್ ಡಾಗ್ (ಪತ್ತೆದಾರಿ ನಾಯಿಗಳು) ಮತ್ತು ತಾಂತ್ರಿಕ ತಂಡಗಳ ಸಹಾಯದಿಂದ ಇಡೀ ಕಟ್ಟಡವನ್ನು ಕೂಲಂಕಷವಾಗಿ ತಪಾಸಣೆ ಮಾಡಲಾಗುತ್ತಿದೆ.ನ್ಯಾಯಾಲಯದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಬೆದರಿಕೆ ಕರೆ ಅಥವಾ ಸಂದೇಶ ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಮ್ ತಂಡವು ಕಾರ್ಯಾಚರಣೆ ನಡೆಸುತ್ತಿದೆ. ಇದು ಕೇವಲ ಹುಸಿ ಬೆದರಿಕೆಯೇ ಅಥವಾ ಇದರ ಹಿಂದೆ ಯಾವುದಾದರೂ ಸಂಚು ಇದೆಯೇ ಎಂಬ ಆಯಾಮದಲ್ಲಿ ತನಿಖೆ ಮುಂದುವರಿದಿದೆ.








