ನವದೆಹಲಿ:ಸೊಂತ ಊರು ಬಿಟ್ಟು ಉದ್ಯೋಗಕ್ಕಾಗಿ ಬೇರೆ ನಗರಗಳಿಗೆ ವಲಸೆ ಬಂದಿರುವ ಕಾರ್ಮಿಕರು ಮತ್ತು ಉನ್ನತ ವ್ಯಾಸಂಗಕ್ಕಾಗಿ ಹೊರಗಿನಿಂದ ಬಂದಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ದೊಡ್ಡ ರಿಲೀಫ್ ನೀಡಿದೆ. ಈಗ ಯಾವುದೇ ವಿಳಾಸ ಪುರಾವೆ (Address Proof) ಇಲ್ಲದೆಯೇ 5 ಕೆಜಿ ತೂಕದ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಿದೆ.
ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಕಡಿಮೆ ಆದಾಯದ ಗುಂಪಿನ ಜನರಿಗೆ ಅಡುಗೆ ಅನಿಲದ ಸೌಲಭ್ಯವನ್ನು ಸುಲಭವಾಗಿ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.ಈ ಸಣ್ಣ ಸಿಲಿಂಡರ್‌ಗಳು ದೇಶಾದ್ಯಂತ ಇರುವ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳ (OMCs) ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿ ಲಭ್ಯವಿರುತ್ತವೆ.
ವಿಳಾಸ ಪುರಾವೆ ಕಡ್ಡಾಯವಲ್ಲದಿದ್ದರೂ, ಸಿಲಿಂಡರ್ ಖರೀದಿಸುವವರು ಯಾವುದಾದರೂ ಒಂದು ಅಧಿಕೃತ ಫೋಟೋ ಗುರುತಿನ ಚೀಟಿಯನ್ನು (ಆಧಾರ್ ಕಾರ್ಡ್, ಮತದಾರರ ಚೀಟಿ ಅಥವಾ ಪ್ಯಾನ್ ಕಾರ್ಡ್) ತೋರಿಸಬೇಕಾಗುತ್ತದೆ.
ಈಸಿಲಿಂಡರ್‌ಗಳು ಮಾರುಕಟ್ಟೆ ದರದಲ್ಲಿ (Market Price) ಲಭ್ಯವಿರುತ್ತವೆ. ಆರಂಭಿಕವಾಗಿ ಸಿಲಿಂಡರ್ ಮತ್ತು ರೆಗ್ಯುಲೇಟರ್ ಖರೀದಿಗೆ ಹಣ ಪಾವತಿಸಬೇಕಾಗುತ್ತದೆ, ನಂತರ ಕೇವಲ ಗ್ಯಾಸ್ ತುಂಬಿಸಲು (Refill) ಹಣ ನೀಡಿದರೆ ಸಾಕಾಗುತ್ತದೆ.
ಬೇರೆ ಊರುಗಳಿಂದ ಬಂದು ಪಿಜಿ ಅಥವಾ ಬಾಡಿಗೆ ಮನೆಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಸ್ಥಳೀಯ ವಿಳಾಸ ಪುರಾವೆ ಒದಗಿಸುವುದು ಕಷ್ಟವಾಗಿತ್ತು. ಈಗ ಅವರಿಗೆ ಇದು ವರದಾನವಾಗಲಿದೆ.ಕಟ್ಟಡ ಕಾರ್ಮಿಕರು ಮತ್ತು ಸಣ್ಣಪುಟ್ಟ ಕೆಲಸ ಮಾಡುವವರಿಗೆ ದೊಡ್ಡ ಸಿಲಿಂಡರ್ ಪಡೆಯುವುದು ಮತ್ತು ವಿಳಾಸದ ದಾಖಲೆ ನೀಡುವುದು ದೊಡ್ಡ ಸವಾಲಾಗಿತ್ತು.ಕಡಿಮೆ ಬಳಕೆಯಿರುವ ಸಣ್ಣ ಕುಟುಂಬಗಳು ಸಹ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.








