ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತು ಇಸ್ರೇಲ್ ಗಡಿಯಲ್ಲಿ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಭಾರತದ ಪ್ರಮುಖ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ಇಸ್ರೇಲ್ ರಾಜಧಾನಿ ಟೆಲ್ ಅವಿವ್ಗೆ ಸಗುವ ತನ್ನ ಎಲ್ಲಾ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಪಶ್ಚಿಮ ಏಷ್ಯಾದ ಆಕಾಶಮಾರ್ಗದಲ್ಲಿನ ಅನಿಶ್ಚಿತತೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೆಹಲಿಯಿಂದ ಟೆಲ್ ಅವಿವ್ಗೆ ವಾರಕ್ಕೆ ನಾಲ್ಕು ಬಾರಿ ಸಂಚರಿಸುತ್ತಿದ್ದ ವಿಮಾನಗಳನ್ನು ಸದ್ಯದ ಪರಿಸ್ಥಿತಿ ತಿಳಿಯಾಗುವವರೆಗೆ ಸ್ಥಗಿತಗೊಳಿಸಲಾಗಿದೆ. ಕೇವಲ ಇಸ್ರೇಲ್ ಮಾತ್ರವಲ್ಲದೆ, ಯುರೋಪ್ ಮತ್ತು ಅಮೆರಿಕಕ್ಕೆ ತೆರಳುವ ವಿಮಾನಗಳು ಇರಾನ್ ಆಕಾಶಮಾರ್ಗವನ್ನು ಬಳಸದಂತೆ ಸೂಚಿಸಲಾಗಿದೆ. ಇದರಿಂದಾಗಿ ಪ್ರಯಾಣದ ಸಮಯ 30 ರಿಂದ 45 ನಿಮಿಷಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈಗಾಗಲೇ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಪೂರ್ಣ ಹಣ ಮರುಪಾವತಿ (Refund) ಅಥವಾ ಪರ್ಯಾಯ ದಿನಾಂಕಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ.








