ಬೆಂಗಳೂರು: ರಾಜ್ಯದಲ್ಲಿ ಹಳೆಯ ವಾಹನಗಳಿಗೆ ಹೆಚ್ಎಸ್ಆರ್ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಲ್ಲ ಎಂಬ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಕೆಲವು ಮಾಧ್ಯಮಗಳಲ್ಲಿ ಹಳೆಯ ವಾಹನಗಳಿಗೆ ಹೆಚ್ಎಸ್ಆರ್ಪಿ ನಿಯಮವನ್ನು ಹಿಂಪಡೆಯಲಾಗಿದೆ ಎಂಬ ತಪ್ಪು ಮಾಹಿತಿ ಹರಡಿತ್ತು. ಆದರೆ, ಇಲಾಖೆಯು ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಏಪ್ರಿಲ್ 1, 2019ಕ್ಕಿಂತ ಮುಂಚಿತವಾಗಿ ನೋಂದಣಿಯಾದ ಎಲ್ಲಾ ವಾಹನಗಳಿಗೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ. ಈ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ನ್ಯಾಯಾಲಯದ ತಡೆಯಾಜ್ಞೆ ಇಲ್ಲ: ಹೆಚ್ಎಸ್ಆರ್ಪಿ ಅಳವಡಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಪ್ರಕರಣವನ್ನು ಏಕಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆಯೇ ಹೊರತು, ಸಾರಿಗೆ ಇಲಾಖೆಯ ಆದೇಶಕ್ಕೆ ಯಾವುದೇ ಅಡೆತಡೆ ಉಂಟಾಗಿಲ್ಲ.ನ್ಯಾಯಾಲಯವು ಈ ವಿಷಯದಲ್ಲಿ ಯಾವುದೇ ತಡೆಯಾಜ್ಞೆ ನೀಡುವ ಬದಲಾಗಿ, ಹೆಚ್ಎಸ್ಆರ್ಪಿ ಅಳವಡಿಕೆಯಲ್ಲಿ ತರಾತುರಿ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಆದ್ದರಿಂದ, ವಾಹನ ಮಾಲೀಕರು ಸುಳ್ಳು ಸುದ್ದಿಗಳಿಗೆ ಮಾರುಹೋಗದೆ, ನಿಗದಿತ ಸಮಯದೊಳಗೆ ತಮ್ಮ ವಾಹನಗಳಿಗೆ ಸುರಕ್ಷಿತ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.








