ಮಂಡ್ಯ : ಶೋಷಣೆಗೆ ಒಳಗಾಗುವ ಎಸ್ಸಿ, ಎಸ್ಟಿ ಜನಾಂಗದವರ ಸಮಸ್ಯೆಗಳಿಗೆ ತಾಲೂಕು ಹಂತದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್. ಮೂರ್ತಿ ಹೇಳಿದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಶೋಷಣೆಗೆ ಒಳಗಾಗುವ ಎಸ್ಸಿ, ಎಸ್ಟಿ ಜನಾಂಗದವರು ಯಾರೇ ಆಗಿರಲಿ ಆಯೋಗಕ್ಕೆ ಬಂದು ನಿರ್ಭೀತಿಯಿಂದ ಪ್ರಕರಣ ದಾಖಲಿಸಬಹುದು. ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಅಯೋಗ ಸದಾ ನಿಮ್ಮೊಂದಿಗೆ ಇರುತ್ತದೆ. ನಾನು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮದ್ದೂರು ತಾಲೂಕಿನಿಂದ ಈಗಾಗಲೇ 48 ಅರ್ಜಿಗಳು ಆಯೋಗಕ್ಕೆ ಸಲ್ಲಿಕೆಯಾಗಿತ್ತು. ಅದರಲ್ಲಿ ನ್ಯಾಯಾಲಯದ ಮುಖಾಂತರ 12 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಜನರು ಆಯೋಗಕ್ಕೆ ಅಲೆದಾಡಬಾರದು ಎಂಬ ಉದ್ದೇಶದಿಂದ ಕೆಲವು ಅರ್ಜಿಗಳನ್ನು ತಾಲೂಕು ಮಟ್ಟದಲ್ಲೆ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮದ್ದೂರು ನಗರಸಭೆಯಲ್ಲಿ 2023 ರಿಂದ 2025 ರವರೆಗೆ ಶೇ. 25 ರ ಅನುದಾನದ ಖರ್ಚು ವೆಚ್ಚಗಳ ಬಗ್ಗೆ ಪೌರಾಯುಕ್ತರ ಬಳಿ ಮಾಹಿತಿ ಕೇಳಿದ್ದು, ಸೂಕ್ತ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ. ಇನ್ನು ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಲಿತ ಜನಾಂಗಕ್ಕೆ ಪರ್ಯಾಯವಾಗಿ ಸ್ಮಶಾನ ಭೂಮಿ ನೀಡುವಂತೆ ಮನವಿ ಬಂದಿದ್ದು, ಅಂತಹ ಸೂಕ್ಷ್ಮ ಗ್ರಾಮಗಳಲ್ಲಿ ಪರ್ಯಾಯವಾಗಿ ಸ್ಮಶಾನ ಭೂಮಿ ಮಂಜೂರು ಮಾಡಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೆಲ ದಿನಗಳ ಹಿಂದೆ ಕೆ.ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಗಲಭೆ ಕುರಿತು ಮಾತನಾಡಿದ ಅಧ್ಯಕ್ಷರು ಗಲಭೆ ನಡೆಯಬಾರದಿತ್ತು ಆದರೆ, ನಡೆದು ಹೋಗಿದೆ. ತಾಲೂಕು ಆಡಳಿತ ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆಗೆ ಗ್ರಾಮಕ್ಕೆ ಭೇಟಿ ನೀಡಲಾಗುವುದು ಎಂದು ಹೇಳಿದರು.
ಮುಖ್ಯವಾಗಿ ಎಲ್ಲಾ ಇಲಾಖೆಗಳಲ್ಲಿ ಎಸ್ಸಿಪಿ/ಟಿಎಸ್ಪಿ ಹಣ ಸರಿಯಾಗಿ ಅರ್ಹರಿಗೆ ತಲುಪಬೇಕು. ಎಸ್ಸಿ, ಎಸ್ಟಿ ಸಮುದಾಯಗಳ ನಾಗರಿಕ ಹಕ್ಕುಗಳು, ಶಿಕ್ಷಣ ಹಾಗೂ ಅವರನ್ನು ಸಾಮಾಜಿಕವಾಗಿ ಸದೃಢ ಮಾಡಲು ಅಧಿಕಾರಿಗಳು ಕ್ರಮವಹಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸುವುದು ಅಧಿಕಾರಿಗಳ ಕರ್ತವ್ಯ ಇದರಲ್ಲಿ ಯಾವುದೇ ಲೋಪ ದೋಷಗಳು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಆಯೋಗವು ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಎಚ್ಚರಿಕೆ ನೀಡಿದರು.
ಇದೇ ವೇಳೆ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಓ ರಾಮಲಿಂಗಯ್ಯ, ನಗರಸಭಾ ಪೌರಾಯುಕ್ತೆ ರಾಧಿಕಾ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಸಿಪಿಐ ನವೀನ್ ಮುಖಂಡರಾದ ಚಿದಂಬರ ಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಹೆಚ್.ರಾಜೇಂದ್ರ, ಕೆಡಿಪಿ ಸದಸ್ಯ ಅರುವನಹಳ್ಳಿ ಸಿದ್ದರಾಜು, ಶಿವಲಿಂಗಯ್ಯ, ಮಹದೇವಯ್ಯ, ಮೂರ್ತಿ, ಕೆ.ಶ್ರೀನಿವಾಸ್, ಸ್ವಾಮಿ, ಆಲೂರು ಕುಮಾರ್, ಭಾನು ಪ್ರಕಾಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಉಪ ಚುನಾವಣೆಯಲ್ಲಿ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
BIG Alert: ‘ಆನ್ಲೈನ್’ನಲ್ಲಿ ‘IPL ಟಿಕೆಟ್’ ಖರೀದಿಗಾಗಿ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ.!








