ಹುಬ್ಬಳ್ಳಿ: ನಗರದಲ್ಲಿ ಸಂಚಲನ ಮೂಡಿಸಿರುವ ಲವ್ ಜಿಹಾದ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ಯುವತಿಯ ವಿರುದ್ಧವೇ ಜಿಮ್ ಟ್ರೈನರ್ ಸಮೀರ್ ಈಗ ತಿರುಗಿಬಿದ್ದಿದ್ದು, “ವಿಡಿಯೋ ಮಾಡಿದ್ದು ಆಕೆ, ಆಕೆಯ ಮೊಬೈಲ್ ಪರಿಶೀಲಿಸಿ” ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾನೆ.
ಆರೋಪಗಳ ನಿರಾಕರಣೆ: ಸಂತ್ರಸ್ತ ಯುವತಿ ನೀಡಿದ್ದ ದೂರಿನಲ್ಲಿ ಸಮೀರ್ ತನಗೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮೀರ್, “ಅಂದು ಪ್ರಜ್ಞೆ ತಪ್ಪಿದ್ದು ನಾನೇ ಹೊರತು ಆಕೆಯಲ್ಲ. ವಿಡಿಯೋ ಮಾಡಿದ್ದು ಕೂಡ ಆಕೆಯೇ. ಆಕೆಯ ಫೋನ್‌ನಲ್ಲಿ ವಿಡಿಯೋಗಳಿವೆ, ನನ್ನ ಮೊಬೈಲ್‌ನಲ್ಲಿ ಏನೂ ಇಲ್ಲ,” ಎಂದು ವಾದಿಸಿದ್ದಾನೆ.
ಯುವತಿಯ ಮೊಬೈಲ್ ಚೆಕ್ ಮಾಡಿ ಎಂದ ಸಮೀರ್: “ವಿಡಿಯೋ ಮಾಡಿದ್ದು ಮಾತ್ರ ನಿಜ. ಆದರೆ ಆ ವಿಡಿಯೋಗಳು ಯಾರ ಫೋನ್‌ನಲ್ಲಿವೆ ಎಂದು ಪೊಲೀಸರು ಚೆಕ್ ಮಾಡಲಿ. ಆಕೆಯ ಮೊಬೈಲ್ ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ. ನನ್ನ ಮೊಬೈಲ್ ಪ್ರಸ್ತುತ ಎಸ್ಎಸ್‌ಕೆ ಸಮಾಜದವರ ಬಳಿ ಇದೆ, ಅದನ್ನು ತರಿಸಿ ನೋಡಿ, ಅದರಲ್ಲಿ ಒಂದು ವಿಡಿಯೋ ಕೂಡ ಸಿಗುವುದಿಲ್ಲ” ಎಂದು ಸಮೀರ್ ಹೇಳಿದ್ದಾನೆ.
ಒತ್ತಡದ ಆರೋಪ: ಯುವತಿಯ ಬಗ್ಗೆ ಮಾತನಾಡುತ್ತಾ, “ಆಕೆ ತುಂಬಾ ಒಳ್ಳೆಯ ಹುಡುಗಿ. ಆದರೆ ಆಕೆಯ ಪೋಷಕರು ಮತ್ತು ಸಮಾಜದವರ ಒತ್ತಡಕ್ಕೆ ಮಣಿದು ನನ್ನ ವಿರುದ್ಧ ಸುಳ್ಳು ದೂರು ನೀಡುತ್ತಿದ್ದಾಳೆ. ಆಕೆಯೇ ಸ್ವತಃ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾಳೆ” ಎಂದು ಸಮೀರ್ ಆರೋಪಿಸಿದ್ದಾನೆ.
ಸದ್ಯ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸಮೀರ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡೂ ಕಡೆಯ ವಾದಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ತೀವ್ರಗೊಂಡಿದೆ.







