ಹುಬ್ಬಳ್ಳಿ: ನಗರದಲ್ಲಿ ಸಂಚಲನ ಮೂಡಿಸಿರುವ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜಿಮ್ ಟ್ರೈನರ್ ಸಮೀರ್‌ನ ಕರಾಳ ಮುಖಗಳು ಒಂದೊಂದಾಗಿ ಬಯಲಾಗುತ್ತಿವೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ ಈತ ಸುಮಾರು 8 ರಿಂದ 10 ಬಾರಿ ಗರ್ಭಪಾತದ ಮಾತ್ರೆಗಳನ್ನು ನೀಡಿದ್ದ ಎಂಬ ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ.
ಮೊಬೈಲ್‌ನಲ್ಲಿ ಪತ್ತೆಯಾದ ವಿಡಿಯೋ ಸಾಕ್ಷ್ಯ: ಪೊಲೀಸರು ಆರೋಪಿ ಸಮೀರ್‌ನ ಮೊಬೈಲ್ ಫೋನ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಅಘಾತಕಾರಿ ದೃಶ್ಯಗಳು ಕಂಡುಬಂದಿವೆ. ಸಂತ್ರಸ್ತ ಯುವತಿ ಗರ್ಭಪಾತದ ಮಾತ್ರೆ ತೆಗೆದುಕೊಳ್ಳುತ್ತಿರುವ ವಿಡಿಯೋಗಳು ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಪ್ರತಿ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆಕೆಗೆ ಮಾತ್ರೆಗಳನ್ನು ನೀಡುತ್ತಿದ್ದ ಸಮೀರ್, ಆಕೆ ಮಾತ್ರೆ ಸೇವಿಸುವುದನ್ನು ಖಚಿತಪಡಿಸಿಕೊಳ್ಳಲು ವಿಡಿಯೋ ಮಾಡಿ ಕಳಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಯುವತಿಯು ಜಿಮ್‌ಗೆ ಹೋಗುತ್ತಿದ್ದಾಗ ಸಮೀರ್‌ನ ಪರಿಚಯವಾಗಿತ್ತು. 2025ರ ಆಗಸ್ಟ್ 16 ರಂದು ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದ ಸಮೀರ್, ಜ್ಯೂಸ್‌ನಲ್ಲಿ ಮದಕ ಪದಾರ್ಥ ಬೆರೆಸಿ ಕುಡಿಸಿ ಪ್ರಜ್ಞೆ ತಪ್ಪಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಆ ವೇಳೆ ದೌರ್ಜನ್ಯದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದ ಈತ, ಅದನ್ನು ತೋರಿಸಿ ಬೆದರಿಕೆ ಹಾಕುತ್ತಾ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
ಇತರ ಯುವತಿಯರಿಗೂ ಗಾಳ: ಸಮೀರ್‌ನ ಮೊಬೈಲ್ ಚಾಟ್‌ಗಳನ್ನು ಪರಿಶೀಲಿಸಿದಾಗ ಆತ ಹಲವಾರು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಜಿಮ್‌ಗೆ ಬರುವ ಯುವತಿಯರೊಂದಿಗೆ ಸ್ನೇಹ ಬೆಳೆಸಿ ಅವರನ್ನು ವಂಚಿಸುತ್ತಿದ್ದ ಎನ್ನಲಾಗಿದ್ದು, ಹಲವು ಯುವತಿಯರೊಂದಿಗೆ ಈತ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ಈತ ನಿಷೇಧಿತ ಮತ್ತು ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸುತ್ತಿದ್ದ ಎಂಬುದು ಬ್ರೌಸಿಂಗ್ ಹಿಸ್ಟರಿಯಿಂದ ತಿಳಿದುಬಂದಿದೆ.
ಸದ್ಯ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸಮೀರ್ ವಿರುದ್ಧ ಬಿಎನ್‌ಎಸ್ (BNS) ಸೆಕ್ಷನ್ 64(1), 351 ಮತ್ತು 123 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪ್ರಸ್ತುತ ಆರೋಪಿ ಸಮೀರ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.








