ಟೆಹ್ರಾನ್:ಇರಾನ್ ನೀಡಿದ್ದ ಎಚ್ಚರಿಕೆಗಳನ್ನು ಲೆಕ್ಕಿಸದ ಇಸ್ರೇಲ್, ಈಗ ನೇರ ಯುದ್ಧಕ್ಕೆ ನಾಂದಿ ಹಾಡಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಇರಾನ್ನಾದ್ಯಂತ ಏಕಕಾಲದಲ್ಲಿ 70ಕ್ಕೂ ಹೆಚ್ಚು ಕಡೆಗಳಲ್ಲಿ ವಿನಾಶಕಾರಿ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯು ಇರಾನ್ನ ಅತ್ಯಂತ ಶಕ್ತಿಶಾಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದು, ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಫೋಟದ ಸದ್ದಿಗೆ ಜನರು ಬೆಚ್ಚಿಬಿದ್ದಿದ್ದಾರೆ.
ಇಸ್ರೇಲ್ ಮೇಲೆ ದಾಳಿ ಮಾಡಲು ಸಜ್ಜಾಗಿದ್ದ ಇರಾನ್ನ ಅತ್ಯಾಧುನಿಕ ಬ್ಯಾಲಿಸ್ಟಿಕ್ ಕ್ಷಿಪಣಿ (Ballistic Missile) ಉಡಾವಣಾ ಕೇಂದ್ರಗಳನ್ನು ಇಸ್ರೇಲ್ ವಿಮಾನಗಳು ಬಾಂಬ್ ಹಾಕಿ ನಾಶಪಡಿಸಿವೆ.
ಇರಾನ್ನ ಹೆಮ್ಮೆಯ ಯುಎವಿ (UAV/Drones) ಅಥವಾ ಡ್ರೋನ್ ತಯಾರಿಕಾ ಮತ್ತು ಕಾರ್ಯಾಚರಣಾ ಕೇಂದ್ರಗಳ ಮೇಲೆ ಇಸ್ರೇಲ್ ಭಾರಿ ದಾಳಿ ನಡೆಸಿದೆ. ಇದರಿಂದ ಇರಾನ್ನ ವಾಯುಪಡೆಗೆ ದೊಡ್ಡ ಹೊಡೆತ ಬಿದ್ದಿದೆ.
ಇಸ್ರೇಲ್ನ ಎಫ್-35 ಮತ್ತು ಇತರ ಅತ್ಯಾಧುನಿಕ ಯುದ್ಧ ವಿಮಾನಗಳು ಇರಾನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಒಟ್ಟು 70ಕ್ಕೂ ಹೆಚ್ಚು ಕಡೆಗಳಲ್ಲಿ ಗುರಿ ತಲುಪಿವೆ.ದಾಳಿಯ ನಂತರ ಇರಾನ್ ತನ್ನ ಎಲ್ಲಾ ವಿಮಾನ ನಿಲ್ದಾಣಗಳನ್ನು ಮುಚ್ಚಿದ್ದು, ಪ್ರತಿದಾಳಿಗೆ ಸಿದ್ಧತೆ ನಡೆಸುತ್ತಿದೆ. ಇಸ್ರೇಲ್ನ ಈ ನಡೆ ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳಿದೆ.








