ಫ್ಲೋರಿಡಾ: ದಶಕಗಳ ಕಾಲ ಭೂಮಿಯ ಕಕ್ಷೆಗೆ ಸೀಮಿತವಾಗಿದ್ದ ಮಾನವನ ಹೆಜ್ಜೆಗಳು ಇದೀಗ ಮತ್ತೆ ಚಂದಿರನತ್ತ ಮುಖ ಮಾಡಿವೆ. ನಾಸಾದ ಮಹತ್ವಾಕಾಂಕ್ಷೆಯ ಆರ್ಟೆಮಿಸ್-2 ಮಿಷನ್‌ನ ಭಾಗವಾಗಿ ಚಂದ್ರನತ್ತ ಪ್ರಯಾಣಿಸುತ್ತಿರುವ ಗಗನಯಾತ್ರಿಗಳು, ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ಚಿತ್ರಗಳನ್ನು ಸೆರೆಹಿಡಿದು ಕಳುಹಿಸಿದ್ದಾರೆ. 1972ರ ಅಪೊಲೊ-17 ಮಿಷನ್ ನಂತರ, ಅಂದರೆ ಸುಮಾರು 52 ವರ್ಷಗಳ ಬಳಿಕ ಮಾನವಸಹಿತ ನೌಕೆಯ ಗಗನಯಾತ್ರಿಗಳು ಭೂಮಿಯನ್ನು ಇಷ್ಟು ದೂರದಿಂದ ಚಿತ್ರೀಕರಿಸುತ್ತಿರುವುದು ಇದೇ ಮೊದಲು.
ನಯನಮನೋಹರ ಚಿತ್ರಗಳು
ಮಿಷನ್ ಕಮಾಂಡರ್ ರೀಡ್ ವೈಸ್‌ಮನ್ ಅವರು ಓರಿಯನ್ ಕ್ಯಾಪ್ಸುಲ್‌ನ ಕಿಟಕಿಯಿಂದ ಭೂಮಿಯ ಈ ಅದ್ಭುತ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಒಂದು ಚಿತ್ರದಲ್ಲಿ ಭೂಮಿಯ ಅರ್ಧಚಂದ್ರಾಕೃತಿಯ ವಕ್ರರೇಖೆ ಸುಂದರವಾಗಿ ಕಂಡರೆ, ಮತ್ತೊಂದು ಚಿತ್ರದಲ್ಲಿ ನೀಲಿ ಸಾಗರಗಳ ಮೇಲೆ ಬಿಳಿ ಮೋಡಗಳು ಹರಡಿಕೊಂಡಿರುವ ಭೂಮಿಯ ಪೂರ್ಣ ದೃಶ್ಯ ಕಣ್ಮನ ಸೆಳೆಯುತ್ತಿದೆ. ಈ ಫೋಟೋಗಳನ್ನು ನಾಸಾ ಶುಕ್ರವಾರ ಬಿಡುಗಡೆ ಮಾಡಿದೆ.
ಚಂದಿರನತ್ತ ನಾಗಾಲೋಟ
ಪ್ರಸ್ತುತ ಗಗನಯಾತ್ರಿಗಳ ತಂಡವು ಭೂಮಿಯಿಂದ ಸುಮಾರು 1,45,000 ಕಿಲೋಮೀಟರ್ ದೂರದಲ್ಲಿದ್ದು, ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗದಲ್ಲಿ ಚಂದ್ರನತ್ತ ಸಾಗುತ್ತಿದೆ. ಸೋಮವಾರದ ವೇಳೆಗೆ ಈ ನೌಕೆಯು ಚಂದ್ರನ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ.
ಮಿಷನ್‌ನ ಪ್ರಮುಖಾಂಶಗಳು:
ತಂಡದಲ್ಲಿ ಯಾರೆಲ್ಲಿದ್ದಾರೆ?: ಈ ಐತಿಹಾಸಿಕ ತಂಡದಲ್ಲಿ ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಮಿಷನ್ ಸ್ಪೆಷಲಿಸ್ಟ್‌ಗಳಾದ ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಇದ್ದಾರೆ.
ಇತಿಹಾಸ ನಿರ್ಮಾಣ: ವಿಕ್ಟರ್ ಗ್ಲೋವರ್ ಚಂದ್ರನತ್ತ ಪಯಣ ಬೆಳೆಸಿದ ಮೊದಲ ಕಪ್ಪು ವರ್ಣೀಯ ಗಗನಯಾತ್ರಿ, ಕ್ರಿಸ್ಟಿನಾ ಕೋಚ್ ಮೊದಲ ಮಹಿಳೆ ಮತ್ತು ಹ್ಯಾನ್ಸೆನ್ ಅಮೆರಿಕದವರಲ್ಲದ ಮೊದಲ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಯು-ಟರ್ನ್ ಪ್ರಯಾಣ: ಈ ತಂಡವು ಚಂದ್ರನ ಮೇಲೆ ಇಳಿಯುವುದಿಲ್ಲ. ಬದಲಾಗಿ, ಚಂದ್ರನನ್ನು ಸುತ್ತು ಹಾಕಿ ‘ಯು-ಟರ್ನ್’ ಪಡೆದು ನೇರವಾಗಿ ಭೂಮಿಗೆ ಮರಳಲಿದೆ. ಈ ಮೂಲಕ ಅವರು 1970ರ ಅಪೊಲೊ-13 ನಿರ್ಮಿಸಿದ್ದ ಗರಿಷ್ಠ ದೂರದ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.
ಮಾನವ ವಸತಿಗೆ ಮೊದಲ ಹೆಜ್ಜೆ
“1972ರ ನಂತರ ಮೊದಲ ಬಾರಿಗೆ ಮಾನವರು ಭೂಮಿಯ ಕಕ್ಷೆಯನ್ನು ದಾಟಿ ಹೊರಹೋಗಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ” ಎಂದು ನಾಸಾ ಅಧಿಕಾರಿ ಲೋರಿ ಗ್ಲೇಜ್ ತಿಳಿಸಿದ್ದಾರೆ. ಈ ಮಿಷನ್ ಯಶಸ್ವಿಯಾದರೆ, 2028ರ ವೇಳೆಗೆ ಚಂದ್ರನ ಮೇಲೆ ಮಾನವ ವಸತಿ ಸ್ಥಾಪಿಸುವ ನಾಸಾದ ಕನಸಿಗೆ ದೊಡ್ಡ ಬಲ ಸಿಗಲಿದೆ.
ಬರುವ ಏಪ್ರಿಲ್ 10 ರಂದು ಈ ತಂಡವು ಅತ್ಯಂತ ವೇಗವಾಗಿ ಭೂಮಿಯ ವಾತಾವರಣವನ್ನು ಪ್ರವೇಶಿಸಿ ಪೆಸಿಫಿಕ್ ಸಾಗರದಲ್ಲಿ ಇಳಿಯುವ ಗುರಿಯನ್ನು ಹೊಂದಿದೆ. ಪ್ರಯಾಣದ ಮಧ್ಯೆ ಓರಿಯನ್ ನೌಕೆಯ ಶೌಚಾಲಯದಲ್ಲಿ ಸಣ್ಣ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತಾದರೂ, ಗಗನಯಾತ್ರಿಗಳು ಅದನ್ನು ಯಶಸ್ವಿಯಾಗಿ ಸರಿಪಡಿಸಿದ್ದಾರೆ.
We see our home planet as a whole, lit up in spectacular blues and browns. A green aurora even lights up the atmosphere. That's us, together, watching as our astronauts make their journey to the Moon. pic.twitter.com/6JkKufBgtJ
— NASA (@NASA) April 3, 2026








