ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಮೇಲೆ ನಡೆದ ಹಲ್ಲೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಮಲಪ್ಪುರಂ ಜಿಲ್ಲೆಯ ವಂಡೂರ್ ಎಂಬಲ್ಲಿ ಯುಡಿಎಫ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾಗ ತರೂರ್ ಅವರ ಕಾಫಿಲೆಯನ್ನು ಬೆನ್ನಟ್ಟಿದ ಅನಾಮಧೇಯ ಗುಂಪು, ಅವರ ವಾಹನವನ್ನು ತಡೆದು ದಾಳಿ ನಡೆಸಿದೆ. ಈ ವೇಳೆ ತರೂರ್ ಅವರ ರಕ್ಷಣೆಗೆ ಬಂದ ಭದ್ರತಾ ಸಿಬ್ಬಂದಿಯ ಮೇಲೆ (Gunman) ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಶಿ ತರೂರ್ ಅವರು ಎರಡು ವಾಹನಗಳ ಕಾಫಿಲೆಯಲ್ಲಿ ಸಂಚರಿಸುತ್ತಿದ್ದಾಗ, ಎರಡು ಕಾರುಗಳಲ್ಲಿ ಬಂದ ಸುಮಾರು 8 ಮಂದಿ ದುಷ್ಕರ್ಮಿಗಳು ಅವರ ವಾಹನವನ್ನು ಚೇಸ್ ಮಾಡಿದ್ದಾರೆ. ನಂತರ ಸಂಸದರ ಕಾರನ್ನು ಅಡ್ಡಗಟ್ಟಿ ಗಾಜುಗಳನ್ನು ಪುಡಿ ಮಾಡಲು ಪ್ರಯತ್ನಿಸಿದ್ದಾರೆ.ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ತರೂರ್ ಅವರ ಗನ್‌ಮ್ಯಾನ್ ಕಾರಿನಿಂದ ಹೊರಬಂದು ದುಷ್ಕರ್ಮಿಗಳನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈಗಾಗಲೇ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.ಚುನಾವಣೆ ಸಂದರ್ಭದಲ್ಲಿ ಹಿರಿಯ ನಾಯಕರೊಬ್ಬರ ಮೇಲೆ ಇಂತಹ ದಾಳಿ ನಡೆದಿರುವುದು ಭದ್ರತಾ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








