ಬೀದರ್: ವೀರಶೈವ ಲಿಂಗಾಯತ ಜಂಗಮರು ಪರಿಶಿಷ್ಟ ಜಾತಿ (SC) ಪಟ್ಟಿಗೆ ಸೇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ ದಶಕಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.
ಪ್ರಕರಣದ ಹಿನ್ನೆಲೆ:
ಬೀದರ್ ನಗರಸಭೆಯ ಮಾಜಿ ಸದಸ್ಯ ಹಾಗೂ ಏಕತಾ ಫೌಂಡೇಶನ್ ಅಧ್ಯಕ್ಷರಾದ ರವೀಂದ್ರ ಸ್ವಾಮಿ ಅವರು ತಾವು ‘ಬೇಡ ಜಂಗಮ’ ಜಾತಿಗೆ ಸೇರಿದವರೆಂದು ಎಸ್ಸಿ ಪ್ರಮಾಣಪತ್ರ ಪಡೆದಿದ್ದರು. ಇದನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆದಾಗ, ಹೈಕೋರ್ಟ್ ರವೀಂದ್ರ ಸ್ವಾಮಿ ಅವರು ವೀರಶೈವ ಲಿಂಗಾಯತ ಜಂಗಮರಾಗಿದ್ದು, ಎಸ್ಸಿ ಪ್ರಮಾಣಪತ್ರ ಪಡೆಯಲು ಅನರ್ಹರು ಎಂದು ತೀರ್ಪು ನೀಡಿತ್ತು.
ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಅರ್ಜಿ:
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರವೀಂದ್ರ ಸ್ವಾಮಿ ಅವರು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 2025ರ ನವೆಂಬರ್ 24ರಂದು ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಈ ಆದೇಶದ ವಿರುದ್ಧ ಅವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು (Review Petition) ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠವು ಇತ್ತೀಚೆಗೆ ವಜಾಗೊಳಿಸಿದೆ.
ಹಳೆಯ ದಾಖಲೆಗಳ ಆಧಾರದ ಮೇಲೆ ಈ ಎರಡೂ ಸಮುದಾಯಗಳು ಭಿನ್ನವಾಗಿದ್ದು, ಲಿಂಗಾಯತ ಜಂಗಮರು ಎಸ್ಸಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ರವೀಂದ್ರ ಸ್ವಾಮಿ ಅವರ ವಾದದಲ್ಲಿ ಯಾವುದೇ ಹೊಸ ಸಾಕ್ಷ್ಯಗಳಿಲ್ಲದ ಕಾರಣ ಅವರ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ.








