ಚಿಕ್ಕಬಳ್ಳಾಪುರ : ಮುಂದೆ ಹೋಗುತ್ತಿದ್ದ ಕಂಟೈನರ್ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಶೆಟ್ಟಿಗೆರೆ ಕ್ರಾಸ್ ಬಳಿ ಇಂದು ನಡೆದಿದೆ.
ರಕ್ಷಿತಾ ರೆಡ್ಡಿ (23), ಪವನ್ ರೆಡ್ಡಿ (30) ಮೃತಪಟ್ಟವರು. ರಾಜಶೇಖರ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ರಕ್ಷಿತಾ ರೆಡ್ಡಿ (23) ಮತ್ತು ರಾಜಶೇಖರ್ ರೆಡ್ಡಿ ಕಳೆದ 5 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ಅಪಘಾತದಲ್ಲಿ ಪತ್ನಿ ಕೊನೆಯುಸಿರೆಳೆದಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರಾಜಶೇಖರ್ ರೆಡ್ಡಿ, ನವೆಂಬರ್ ತಿಂಗಳಲ್ಲಿ ರಕ್ಷಿತಾ ರೆಡ್ಡಿಯನ್ನ ಮದುವೆಯಾಗಿದ್ದರು. ಇಬ್ಬರೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ಸ್ನೇಹಿತ ಪವನ್ ರೆಡ್ಡಿ ಜೊತೆ ದಂಪತಿ ಹಿಂದೂಪುರದ ಅವಳಗಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








