ನವದೆಹಲಿ:ಜಾಗತಿಕ ಮಟ್ಟದಲ್ಲಿ ತೈಲದ ಅಭಾವ ಎದುರಾಗಿರುವ ಈ ಕಠಿಣ ಸಮಯದಲ್ಲಿ ಬಾಂಗ್ಲಾದೇಶವು ಇಂಧನ ಪೂರೈಕೆಗಾಗಿ ಭಾರತದ ಸಹಾಯ ಕೋರಿದೆ. ಈ ಕುರಿತು ಇಂದು ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ (MEA), “ಬಾಂಗ್ಲಾದೇಶದಿಂದ ಬಂದಿರುವ ಡೀಸೆಲ್ ಪೂರೈಕೆಯ ಮನವಿಯನ್ನು ನಾವು ಪರಿಶೀಲಿಸುತ್ತಿದ್ದೇವೆ,” ಎಂದು ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ತೈಲ ಆಮದು ವ್ಯತ್ಯಯವಾಗಿದ್ದು, ಬಾಂಗ್ಲಾದೇಶವು ತನ್ನ ಇಂಧನ ಅಗತ್ಯತೆಗಳಿಗಾಗಿ ಭಾರತದತ್ತ ಮುಖ ಮಾಡಿದೆ. ಹೆಚ್ಚುವರಿಯಾಗಿ ಸುಮಾರು 50,000 ಮೆಟ್ರಿಕ್ ಟನ್ ಡೀಸೆಲ್ ನೀಡುವಂತೆ ಅದು ವಿನಂತಿಸಿದೆ.
ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು, “ಬಾಂಗ್ಲಾದೇಶಕ್ಕೆ 2007ರಿಂದಲೂ ನಾವು ಇಂಧನ ಪೂರೈಕೆ ಮಾಡುತ್ತಿದ್ದೇವೆ. ಅವರ ಈಗಿನ ಮನವಿಯನ್ನು ನಮ್ಮ ದೇಶದ ಅಗತ್ಯತೆ ಮತ್ತು ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿಸಲಾಗುತ್ತಿದೆ,” ಎಂದು ಹೇಳಿದ್ದಾರೆ.ಈಗಾಗಲೇ ‘ಭಾರತ-ಬಾಂಗ್ಲಾದೇಶ ಫ್ರೆಂಡ್‌ಶಿಪ್ ಪೈಪ್‌ಲೈನ್’ (IBFPL) ಮೂಲಕ ಅಸ್ಸಾಂನ ನುಮಾಲಿಗಢ್ ರಿಫೈನರಿಯಿಂದ ಬಾಂಗ್ಲಾದೇಶಕ್ಕೆ ಡೀಸೆಲ್ ಸರಬರಾಜು ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ 5,000 ಮೆಟ್ರಿಕ್ ಟನ್ ಡೀಸೆಲ್ ಅನ್ನು ಈ ಮೂಲಕ ಕಳುಹಿಸಲಾಗಿದೆ.
ಬಾಂಗ್ಲಾದೇಶದ ಜೊತೆಗೆ ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಕೂಡ ಇಂಧನಕ್ಕಾಗಿ ಭಾರತದ ಮೊರೆ ಹೋಗಿವೆ. ಈ ಎಲ್ಲಾ ರಾಷ್ಟ್ರಗಳಿಗೂ ತನ್ನ ಮಿತಿಯೊಳಗೆ ಸಹಾಯ ಮಾಡಲು ಭಾರತ ಮುಂದಾಗಿದೆ.








