ನವದೆಹಲಿ:ರಾಜಸ್ಥಾನದ ಜೈಪುರದಲ್ಲಿ ಆನೆಯೊಂದಕ್ಕೆ ಗುಲಾಬಿ ಬಣ್ಣ ಬಳಿದು ಫೋಟೋಶೂಟ್ ನಡೆಸಿದ್ದ ರಷ್ಯಾದ ಛಾಯಾಗ್ರಾಹಕಿ ಜೂಲಿಯಾ ಬುರುಲೆವಾ (Julia Buruleva) ಅವರು ಈಗ ಇಂಟರ್ನೆಟ್ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆನೆಯ ಸಾವಿನ ನಂತರ ಅವರ ವಿರುದ್ಧ ಆಕ್ರೋಶ ಹೆಚ್ಚಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಅವರು ತಮಗೆ ಬೆಂಬಲ ನೀಡುವಂತೆ ಕೋರಿ ಹ್ಯಾಶ್‌ಟ್ಯಾಗ್ ಅಭಿಯಾನ ಆರಂಭಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಜೂಲಿಯಾ ಅವರು ‘ಚಂಚಲ್’ ಎಂಬ 65 ವರ್ಷದ ಆನೆಗೆ ಗಾಢ ಗುಲಾಬಿ ಬಣ್ಣ ಬಳಿದು ಮಾಡೆಲ್ ಒಬ್ಬರ ಜೊತೆ ಫೋಟೋಶೂಟ್ ನಡೆಸಿದ್ದರು. ಈ ಚಿತ್ರಗಳು ವೈರಲ್ ಆದ ಬೆನ್ನಲ್ಲೇ ಪ್ರಾಣಿ ಪ್ರೇಮಿಗಳು ಇದನ್ನು ‘ಪ್ರಾಣಿ ಹಿಂಸೆ’ ಎಂದು ಕರೆದಿದ್ದರು.
ಆನೆಯ ಸಾವು: ಫೋಟೋಶೂಟ್‌ನಲ್ಲಿ ಬಳಸಲಾಗಿದ್ದ ಆನೆ ‘ಚಂಚಲ್’ ಫೆಬ್ರವರಿ ತಿಂಗಳಲ್ಲಿ ಮೃತಪಟ್ಟಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ವಿವಾದ ಮತ್ತಷ್ಟು ಸ್ಫೋಟಗೊಂಡಿದೆ. ಬಣ್ಣದ ಬಳಕೆಯಿಂದ ಆನೆಗೆ ತೊಂದರೆಯಾಗಿದೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.
ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಜೂಲಿಯಾ ಬುರುಲೆವಾ, ಆನೆ ವಯೋಸಹಜ ಕಾರಣದಿಂದ ಸತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿ #supportArtistJuliaBuruleva ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ತಮಗಾಗಿ ಬೆಂಬಲ ಕೋರಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನೆಟ್ಟಿಗರ ಆಕ್ರೋಶ: “ನೀವು ಮಾಡಿದ್ದು ಕಲೆ ಅಲ್ಲ, ಅದು ಪ್ರಾಣಿ ಹಿಂಸೆ. ಆನೆಯ ಸಾವಿನ ಬಗ್ಗೆ ಪಶ್ಚಾತ್ತಾಪ ಪಡುವುದನ್ನು ಬಿಟ್ಟು ತಮಗಾಗಿ ಬೆಂಬಲ ಕೋರುತ್ತಿರುವುದು ನಾಚಿಕೆಗೇಡು” ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.








