ವಾಷಿಂಗ್ಟನ್:ಇರಾನ್ ವಿರುದ್ಧ ಅಮೆರಿಕವು ಕಠಿಣ ಮಿಲಿಟರಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧದ ಸ್ವರೂಪದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. “ಇರಾನ್ ವಿರುದ್ಧದ ಯುದ್ಧವು ಸುದೀರ್ಘವಾಗಿ ಮುಂದುವರಿಯುವುದನ್ನು ಸಹಿಸಿಕೊಳ್ಳುವಷ್ಟು ತಾಳ್ಮೆ ಅಮೆರಿಕದ ಜನರಲ್ಲಿ ಇದೆಯೇ ಎಂಬುದು ನನಗೇ ಖಚಿತವಿಲ್ಲ,” ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದ್ದಾರೆ.
ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದ ನಾಗರಿಕರು ಸುದೀರ್ಘ ಅವಧಿಯ ಮತ್ತು ದುಬಾರಿ ವೆಚ್ಚದ ಯುದ್ಧಗಳನ್ನು ಇಷ್ಟಪಡುವುದಿಲ್ಲ. ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳ ಕಹಿ ನೆನಪುಗಳು ಇನ್ನೂ ಜನರ ಮನಸ್ಸಿನಲ್ಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಯುದ್ಧವನ್ನು ಎಳೆದಾಡುವುದಕ್ಕಿಂತ ಹೆಚ್ಚಾಗಿ, ಇರಾನ್ ಮೇಲೆ ಅತ್ಯಂತ ಪ್ರಬಲವಾದ ದಾಳಿ ನಡೆಸಿ ಅತಿ ಕಡಿಮೆ ಅವಧಿಯಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಇರಾದೆಯನ್ನು ಟ್ರಂಪ್ ಈ ಮೂಲಕ ಹೊರಹಾಕಿದ್ದಾರೆ.
ಸುದೀರ್ಘ ಯುದ್ಧವು ಅಮೆರಿಕದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ. ತೈಲ ಬೆಲೆ ಏರಿಕೆ ಮತ್ತು ರಕ್ಷಣಾ ವೆಚ್ಚಗಳು ಜನರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರಬಹುದು ಎಂಬುದು ಅವರ ಆತಂಕವಾಗಿದೆ. ಮುಂಬರುವ ದಿನಗಳಲ್ಲಿ ದೇಶದ ಆಂತರಿಕ ಬೆಂಬಲವಿಲ್ಲದೆ ಯುದ್ಧ ಮುಂದುವರಿಸುವುದು ಕಷ್ಟವಾಗಲಿದೆ ಎಂಬ ಸತ್ಯವನ್ನು ಟ್ರಂಪ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.








