ನವದೆಹಲಿ:ಆಮ್ ಆದ್ಮಿ ಪಕ್ಷದ ಪ್ರಭಾವಿ ಮುಖಂಡ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಪಕ್ಷದ ಉಪನಾಯಕನ (Deputy Leader) ಸ್ಥಾನದಿಂದ ದಿಢೀರ್ ಆಗಿ ತೆಗೆದುಹಾಕಲಾಗಿದೆ. ಅವರ ಜಾಗಕ್ಕೆ ಪಂಜಾಬ್‌ನ ಮತ್ತೊಬ್ಬ ಸಂಸದ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಸಂಸ್ಥಾಪಕ ಅಶೋಕ್ ಕುಮಾರ್ ಮಿತ್ತಲ್ ಅವರನ್ನು ನೇಮಕ ಮಾಡಲಾಗಿದೆ. ಈ ಬೆಳವಣಿಗೆಯು ಆಪ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗೆ ನಾಂದಿ ಹಾಡಿದೆ.
ಆಪ್ ಹೈಕಮಾಂಡ್ ಈಗಾಗಲೇ ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿದ್ದು, ರಾಘವ್ ಚಡ್ಡಾ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಿ ಅಶೋಕ್ ಮಿತ್ತಲ್ ಅವರನ್ನು ನೇಮಿಸುವಂತೆ ಅಧಿಕೃತವಾಗಿ ಕೋರಿದೆ.ಕೇವಲ ಹುದ್ದೆ ಮಾತ್ರವಲ್ಲದೆ, ರಾಜ್ಯಸಭೆಯಲ್ಲಿ ಪಕ್ಷದ ಪರವಾಗಿ ಮಾತನಾಡಲು ರಾಘವ್ ಚಡ್ಡಾ ಅವರಿಗೆ ನಿಗದಿತ ಸಮಯವನ್ನು (Speaking Time) ನೀಡಬಾರದು ಎಂದು ಕೂಡ ಪಕ್ಷವು ವಿನಂತಿಸಿರುವುದು ಅಚ್ಚರಿ ಮೂಡಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಪ್ರಮುಖ ಕಾರ್ಯಕ್ರಮಗಳಿಂದ ರಾಘವ್ ಚಡ್ಡಾ ದೂರ ಉಳಿದಿದ್ದರು. ಅದರಲ್ಲೂ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಅಬಕಾರಿ ನೀತಿ ಪ್ರಕರಣದಿಂದ ಮುಕ್ತರಾದಾಗ ನಡೆದ ಸಂಭ್ರಮಾಚರಣೆ ಮತ್ತು ಜಂತರ್ ಮಂತರ್ ಪ್ರತಿಭಟನೆಯಲ್ಲಿ ಚಡ್ಡಾ ಕಾಣಿಸಿಕೊಳ್ಳದಿರುವುದು ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕರು ಕಾನೂನು ಹೋರಾಟ ನಡೆಸುತ್ತಿದ್ದಾಗ ಚಡ್ಡಾ ಅವರು ಮೌನ ವಹಿಸಿದ್ದು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಬೆಂಬಲ ವ್ಯಕ್ತಪಡಿಸದಿರುವುದು ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.








