ನ್ಯೂಯಾರ್ಕ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ನಡೆಸಿದ ಆಕ್ರಮಣಕಾರಿ ಭಾಷಣವು ಜಾಗತಿಕ ಆರ್ಥಿಕತೆಯ ಮೇಲೆ ಕರಾಳ ಛಾಯೆ ಆವರಿಸುವಂತೆ ಮಾಡಿದೆ. ಟ್ರಂಪ್ ಭಾಷಣದ ಬೆನ್ನಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 106 ಅಮೆರಿಕನ್ ಡಾಲರ್ ದಾಟುವ ಮೂಲಕ ದಾಖಲೆ ಬರೆದಿದೆ.
ಟ್ರಂಪ್ ಅವರ ಭಾಷಣಕ್ಕೂ ಮೊದಲು ಸ್ಥಿರವಾಗಿದ್ದ ತೈಲ ಬೆಲೆಗಳು, ಭಾಷಣದ ನಂತರ ದಿಢೀರನೆ ಏರಿಕೆ ಕಂಡವು. ಹೋರ್ಮುಜ್ ಜಲಸಂಧಿಯ ಸುರಕ್ಷತೆಯ ಬಗ್ಗೆ ಟ್ರಂಪ್ ಮೌನ ವಹಿಸಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.ವಿಶ್ವದ ಒಟ್ಟು ತೈಲ ಪೂರೈಕೆಯ ಸಿಂಹಪಾಲು ಸಾಗುವ ‘ಹೋರ್ಮುಜ್ ಜಲಸಂಧಿ’ (Hormuz Chokehold) ಇರಾನ್ ವಶಕ್ಕೆ ಹೋಗಬಹುದು ಅಥವಾ ಅಲ್ಲಿ ಸಂಚಾರ ಸ್ಥಗಿತಗೊಳ್ಳಬಹುದು ಎಂಬ ಭೀತಿ ಮಾರುಕಟ್ಟೆಯನ್ನು ಕಾಡುತ್ತಿದೆ. ಈ ಕುರಿತು ಟ್ರಂಪ್ ಯಾವುದೇ ಸ್ಪಷ್ಟನೆ ನೀಡದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ತೈಲ ಬೆಲೆ ಏರಿಕೆಯ ಭೀತಿಯಿಂದಾಗಿ ಅಮೆರಿಕದ ವಾಲ್ ಸ್ಟ್ರೀಟ್ ಸೇರಿದಂತೆ ಏಷ್ಯಾ ಮತ್ತು ಯುರೋಪಿಯನ್ ಷೇರು ಮಾರುಕಟ್ಟೆಗಳು ಕೆಂಪು ಬಣ್ಣಕ್ಕೆ ತಿರುಗಿದ್ದು, ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.ಇರಾನ್ ಮೇಲೆ ಅಮೆರಿಕ ಯುದ್ಧ ಸಾರಿದರೆ ಪಶ್ಚಿಮ ಏಷ್ಯಾದಿಂದ ತೈಲ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಎಂಬ ಭೀತಿಯಿಂದಾಗಿ ತೈಲ ಕಂಪನಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಬೆಲೆ ಹೆಚ್ಚಿಸಿವೆ.








