ನವದೆಹಲಿ:ದೇಶದ ಜೀವನಾಡಿಯಾಗಿರುವ ಭಾರತೀಯ ರೈಲ್ವೆಯು 2025-26ರ ಆರ್ಥಿಕ ವರ್ಷದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣ ಕಲ್ಪಿಸಲು ದಾಖಲೆ ಮಟ್ಟದ ಕಾರ್ಯಾಚರಣೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕಳೆದ ಒಂದು ವರ್ಷದಲ್ಲಿ ರೈಲ್ವೆಯು ಒಟ್ಟು 76,352 ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಇತಿಹಾಸ ನಿರ್ಮಿಸಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಭಾರತೀಯ ರೈಲ್ವೆ ಜಾಲದಲ್ಲಿ ಪ್ರತಿದಿನ ಸರಾಸರಿ 25,000 ರೈಲುಗಳು ಸಂಚರಿಸುತ್ತಿವೆ. ಇದು ವಿಶ್ವದ ಅತಿದೊಡ್ಡ ರೈಲ್ವೆ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.ಹಬ್ಬ ಹರಿದಿನಗಳು, ರಜೆ ಅವಧಿ ಮತ್ತು ಪರೀಕ್ಷಾ ಸಮಯಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿಢೀರ್ ಏರಿಕೆಯಾಗುವುದನ್ನು ಗಮನಿಸಿ, ಕಳೆದ ಸಾಲಿನಲ್ಲಿ ದಾಖಲೆಯ 76,352 ವಿಶೇಷ ರೈಲುಗಳನ್ನು ಓಡಿಸಲಾಗಿದೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ.
ರೈಲ್ವೆ ಇಲಾಖೆಯು ಕಳೆದ ಒಂದು ವರ್ಷದಲ್ಲಿ ಸುಮಾರು 700 ಕೋಟಿಗೂ ಅಧಿಕ ಪ್ರಯಾಣಿಕರನ್ನು ತನ್ನ ಗುರಿ ಮುಟ್ಟಿಸಿದೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಯನ್ನು 1,000 ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ.ಸಾಮಾನ್ಯ ದರ್ಜೆಯ (General Class) ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲ್ವೆಯು ಹೆಚ್ಚುವರಿ 2,500 ಸಾಮಾನ್ಯ ಕೋಚ್‌ಗಳನ್ನು ನಿರ್ಮಿಸುತ್ತಿದ್ದು, ಇವುಗಳನ್ನು ಶೀಘ್ರದಲ್ಲೇ ವಿವಿಧ ರೈಲುಗಳಿಗೆ ಅಳವಡಿಸಲಾಗುವುದು.
ರೈಲ್ವೆ ಆಧುನೀಕರಣದ ಭಾಗವಾಗಿ ಅಮೃತ್ ಭಾರತ್ ನಿಲ್ದಾಣಗಳ ಅಭಿವೃದ್ಧಿ ಮತ್ತು ವಂದೇ ಭಾರತ್ ರೈಲುಗಳ ಜಾಲವನ್ನು ವಿಸ್ತರಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
”ನಮ್ಮ ಗಮನ ಕೇವಲ ವೇಗದ ರೈಲುಗಳ ಮೇಲಲ್ಲ, ಬದಲಿಗೆ ಸಾಮಾನ್ಯ ಜನರಿಗೂ ಆರಾಮದಾಯಕ ಪ್ರಯಾಣ ಕಲ್ಪಿಸುವುದಾಗಿದೆ. ಅದಕ್ಕಾಗಿಯೇ ನಾವು ಜನಪ್ರಿಯ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯ ವಿಶೇಷ ರೈಲುಗಳನ್ನು ಮತ್ತು ಹೆಚ್ಚುವರಿ ಬೋಗಿಗಳನ್ನು ಸೇರಿಸುತ್ತಿದ್ದೇವೆ,” ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.








