ನವದೆಹಲಿ: ವಿರೋಧ ಪಕ್ಷಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ತೀವ್ರ ಪ್ರತಿಭಟನೆಯ ನಡುವೆಯೂ, ‘ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ 2026’ ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಇದರೊಂದಿಗೆ ಈ ತಿದ್ದುಪಡಿ ಮಸೂದೆಯು ಈಗ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದಿದೆ.
ಮಸೂದೆಯ ಪ್ರಮುಖ ಅಂಶಗಳು:
-
ಸ್ವಯಂ-ಗುರುತಿಸುವಿಕೆ ರದ್ದು: 2019ರ ಕಾಯ್ದೆಯಲ್ಲಿದ್ದ ‘ಸ್ವಯಂ-ಘೋಷಿತ ಲಿಂಗ ಗುರುತಿಸುವಿಕೆ’ (Self-perceived gender identity) ಹಕ್ಕನ್ನು ಈ ತಿದ್ದುಪಡಿಯು ರದ್ದುಗೊಳಿಸಿದೆ.
-
ವೈದ್ಯಕೀಯ ಮಂಡಳಿ ಕಡ್ಡಾಯ: ಇನ್ನು ಮುಂದೆ ಲಿಂಗತ್ವ ಅಲ್ಪಸಂಖ್ಯಾತರು ಎಂದು ಗುರುತಿಸಿಕೊಳ್ಳಲು ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯ ತಪಾಸಣೆ ಮತ್ತು ಪ್ರಮಾಣಪತ್ರ ಕಡ್ಡಾಯವಾಗಿದೆ. ಮುಖ್ಯ ವೈದ್ಯಕೀಯ ಅಧಿಕಾರಿಯ ನೇತೃತ್ವದ ಈ ಮಂಡಳಿಯ ಶಿಫಾರಸಿನ ಮೇರೆಗೆ ಜಿಲ್ಲಾಧಿಕಾರಿಗಳು (DM) ಗುರುತಿನ ಚೀಟಿ ನೀಡಲಿದ್ದಾರೆ.
-
ಕಠಿಣ ಶಿಕ್ಷೆ: ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ನಡೆಯುವ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಗರಿಷ್ಠ 2 ವರ್ಷ ಇದ್ದ ಜೈಲು ಶಿಕ್ಷೆಯನ್ನು ಈಗ 14 ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.
-
ಜೈವಿಕ ಚೌಕಟ್ಟು: ತೃತೀಯಲಿಂಗಿಗಳ ವ್ಯಾಖ್ಯಾನವನ್ನು ಹೆಚ್ಚಾಗಿ ಜೈವಿಕ ಮತ್ತು ವೈದ್ಯಕೀಯ ಅಂಶಗಳ ಆಧಾರದ ಮೇಲೆ (Intersex variations) ನಿಗದಿಪಡಿಸಲಾಗಿದೆ.
ವಿರೋಧ ಏಕೆ? ಈ ತಿದ್ದುಪಡಿಯು 2014ರ ಸುಪ್ರೀಂ ಕೋರ್ಟ್‌ನ ಮಹತ್ವದ ‘ನಾಲ್ಸಾ’ (NALSA) ತೀರ್ಪನ್ನು ಉಲ್ಲಂಘಿಸುತ್ತದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ವೈದ್ಯಕೀಯ ತಪಾಸಣೆಯು ವ್ಯಕ್ತಿಯ ಘನತೆಗೆ ಧಕ್ಕೆ ತರುತ್ತದೆ ಮತ್ತು ಸ್ವಯಂ ಲಿಂಗ ನಿರ್ಧಾರದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂಬುದು ವಿರೋಧ ಪಕ್ಷಗಳ ವಾದವಾಗಿದೆ.
ಸರ್ಕಾರದ ಸ್ಪಷ್ಟನೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ಸಂಸತ್ತಿನಲ್ಲಿ ಉತ್ತರಿಸುತ್ತಾ, “ನೈಜ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡಲು ಮತ್ತು ದುರುಪಯೋಗ ತಡೆಯಲು ಈ ತಿದ್ದುಪಡಿ ತರಲಾಗಿದೆ. ಇದು ತೃತೀಯಲಿಂಗಿ ಸಮುದಾಯಕ್ಕೆ ಸಾಮಾಜಿಕ ಸುಧಾರಣೆ ಮತ್ತು ಘನತೆಯ ಬದುಕನ್ನು ನೀಡುವ ಗುರಿ ಹೊಂದಿದೆ” ಎಂದು ತಿಳಿಸಿದ್ದಾರೆ.
ಈಗಾಗಲೇ ಹಳೆಯ ನಿಯಮದಡಿ ಪ್ರಮಾಣಪತ್ರ ಪಡೆದಿರುವ ಸಾವಿರಾರು ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಈ ಹೊಸ ಕಾನೂನು ಆತಂಕ ಮೂಡಿಸಿದ್ದು, ಸಮುದಾಯದ ಮುಖಂಡರು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸುತ್ತಿದ್ದಾರೆ.
‘ಮೆಸೇಜಿಂಗ್ ಆಪ್’ಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್: ‘ಸಿಮ್ ಬೈಂಡಿಂಗ್’ ಗಡುವು ವರ್ಷಾಂತ್ಯದವರೆಗೆ ವಿಸ್ತರಣೆ
ತೆಲಂಗಾಣದ ಕೊಂಡಗಟ್ಟಿ ದೇವಸ್ಥಾನದ ಬಳಿ ಶೆಡ್ ಕುಸಿತ; 15 ಭಕ್ತರಿಗೆ ಗಾಯ








