ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಅರಾಹಮ (Arahama) ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಭೀಕರ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದಾನೆ. ಮಂಗಳವಾರ ರಾತ್ರಿ ಆರಂಭವಾದ ಈ ಕಾರ್ಯಾಚರಣೆಯು ಬುಧವಾರ ಮುಂಜಾನೆಯವರೆಗೂ ಮುಂದುವರಿದಿದೆ.
ಅರಾಹಮ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ‘ಆಪರೇಷನ್ ಅರಾಹಮ’ ಆರಂಭಿಸಿದ್ದರು. ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸುತ್ತಿದ್ದಾಗ, ಅಡಗಿದ್ದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.
ಶ್ರೀನಗರ ಮೂಲದ ಸೇನೆಯ ಚಿನಾರ್ ಕಾರ್ಪ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, “ಅನುಮಾನಾಸ್ಪದ ಚಟುವಟಿಕೆ ಕಂಡುಬಂದ ಹಿನ್ನೆಲೆಯಲ್ಲಿ ಉಗ್ರರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ಗುಂಡಿನ ದಾಳಿ ಆರಂಭಿಸಿದಾಗ ನಮ್ಮ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿದವು” ಎಂದು ತಿಳಿಸಿದೆ.ಹತನಾದ ಉಗ್ರನ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಉಗ್ರರು ಅಡಗಿರುವ ಸಾಧ್ಯತೆ ಇರುವುದರಿಂದ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಕಾರ್ಯವನ್ನು ತೀವ್ರಗೊಳಿಸಿವೆ.








